ಲೋಕಸಭೆ ಚುನಾವಣೆ: ನೀತಿ ಸಂಹಿತೆ ಉಲ್ಲಂಘನೆಯಾಗದಿರಲು ಕೊಡಗಿನಲ್ಲಿ 56 ತಂಡಗಳ ರಚನೆ

Update: 2019-03-11 17:36 GMT

ಮಡಿಕೇರಿ, ಮಾ.11 : ಕೊಡಗು –ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಎ.18ರಂದು ಚುನಾವಣೆ ನಡೆಯಲಿದ್ದು, ಈ ಸಂಬಂಧ ರವಿವಾರ ಸಂಜೆಯಿಂದಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 56 ತಂಡಗಳನ್ನು ರಚಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಟಿ. ಯೋಗೇಶ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದು, ಆ ನಿಟ್ಟಿನಲ್ಲಿ ಓರ್ವ ಕ್ಯಾಮರಾಮೆನ್ ಸಹಿತ ನಾಲ್ವರನ್ನು ಒಳಗೊಂಡ ಒಟ್ಟು 56 ತಂಡಗಳನ್ನು ರಚಿಸಲಾಗಿದೆ. ತಂಡದಲ್ಲಿ ಓರ್ವ ಮ್ಯಾಜಿಸ್ಟ್ರೇಟ್ ದರ್ಜೆಯ ಅಧಿಕಾರಿಯೂ ಇರಲಿದ್ದಾರೆ ಎಂದು ತಿಳಿಸಿದರು.

ಚುನಾವಣೆಗೆ ಸಂಬಂಧಿಸಿದಂತೆ 41 ಸೆಕ್ಟರ್ ಆಫೀಸರ್ ಗಳು, 42 ಸ್ಥಿರ ಕಣ್ಗಾವಲು ತಂಡ ಹಾಗೂ 14 ಫ್ಲೆಯಿಂಗ್ ಸ್ಕ್ವಾಡ್‍ಗಳನ್ನು ನೇಮಿಸಲಾಗಿದ್ದು, 3 ಅಂತರ ರಾಜ್ಯ ಚೆಕ್‍ಪೋಸ್ಟ್ ಸೇರಿದಂತೆ 14 ಚೆಕ್‍ಪೋಸ್ಟ್ ಗಳನ್ನು ಆರಂಭಿಸಲಾಗಿದೆ. ಇದರೊಂದಿಗೆ ಚುನಾವಣೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಹಾಗೂ ದೂರುಗಳಿಗಾಗಿ ದಿನದ 24 ಗಂಟೆ ಕಾರ್ಯಾಚರಿಸುವ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಸಾರ್ವಜನಿಕರು 1950 ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಹೇಳಿದರು.

ಶೇ.3 ರಷ್ಟು ಮತದಾರರ ಹೆಚ್ಚಳ: ಕಳೆದ (2014) ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 2,10,092 ಮಂದಿ ಪುರುಷರು ಹಾಗೂ 2,11,072 ಮಂದಿ ಮಹಿಳೆಯರು ಮತ್ತು 22 ಮಂದಿ ಇತರರು ಸೇರಿದಂತೆ ಒಟ್ಟು 4,21,186 ಮಂದಿ ಮತದಾರರಿದ್ದರೆ, ಈ ಬಾರಿ 2,17,231 ಮಂದಿ ಪುರುಷರು  2,18,298 ಮಂದಿ ಮಹಿಳೆಯರು ಹಾಗೂ 25 ಮಂದಿ ಇತರರು ಸೇರಿದಂತೆ ಮತದಾರರ ಸಂಖ್ಯೆ 4,35,554ಕ್ಕೆ ಏರಿಕೆಯಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಶೇ.3 ರಷ್ಟು ಮತದಾರರ ಹೆಚ್ಚಳವಾಗಿದೆ ಎಂದು ವಿವರಿಸಿದರು.

ವಿಕಲಚೇತನರಿಗೆ ವಾಹನ ಸೌಲಭ್ಯ: ಜಿಲ್ಲೆಯ ಒಟ್ಟು 4,35,554 ಮಂದಿ ಮತದಾರರಿಗೂ ಗುರುತಿನ ಚೀಟಿ ವಿತರಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಇದುವರೆಗೆ 2769 ಮಂದಿ ವಿಕಲಚೇತನ ಮತದಾರರನ್ನು ಗುರುತಿಸಲಾಗಿದೆ. ಇನ್ನು, ಬಿಟ್ಟು ಹೋಗಿರುವ ವಿಕಲಚೇತನ ಮತದಾರರನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಹಿಂದೆ ವಿಕಲಚೇತನರಿಗೆ ಮತಗಟ್ಟೆಗಳಲ್ಲಿ ರ್ಯಾಂಪ್ ಹಾಗೂ ವೀಲ್‍ಚೇರ್ ಸೌಲಭ್ಯ ಕಲ್ಪಿಸಲಾಗುತ್ತಿದ್ದರೆ, ಈ ಬಾರಿ ಅವರನ್ನು ಮನೆಯಿಂದ ಮತಗಟ್ಟೆಗೆ ಕರೆತಲು ವಾಹನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ ಈ ಬಾರಿ 18-19 ವರ್ಷದ 7,080 ಮಂದಿ ಮತದಾರರನ್ನು ಗುರುತಿಸಲಾಗಿದ್ದು, ಕಳೆದ 15 ದಿನಗಳಲ್ಲಿ 2 ಸಾವಿರ ಹೊಸ ಮತದಾರರ ನೋಂದಣಿಯಾಗಿದೆ. ಮತದಾರರ ನೋಂದಣಿ ಪ್ರಕ್ರಿಯೆ ಇನ್ನೂ ಜಾರಿಯಲ್ಲಿದೆ ಎಂದು ಅವರು ತಿಳಿಸಿದರು.

ಶೇ.75ಕ್ಕಿಂತ ಅಧಿಕ ಮತದಾನ ಗುರಿ: ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಮುಂದುವರಿದಿದೆ. ಇದರೊಂದಿಗೆ ಎಲ್ಲಾ ಬೂತ್ ಮಟ್ಟದಲ್ಲಿ ಮತಯಂತ್ರಗಳ ಬಳಕೆಯ ಬಗ್ಗೆಯೂ ಮತದಾರರಿಗೆ ಅರಿವು ಮೂಡಿಸಲಾಗುತ್ತಿದೆ. ಆ ಮೂಲಕ ಜಿಲ್ಲೆಯಲ್ಲಿ ಶೇ.75ಕ್ಕಿಂತ ಅಧಿಕ ಮತದಾನ ಮಾಡಿಸುವ ಗುರಿ ಹೊಂದಲಾಗಿದೆ. ಕಳೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.71.88ರಷ್ಟು ಮತದಾನವಾಗಿತ್ತು ಎಂದು ಹೇಳಿದರು.

ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 543 ಮತಗಟ್ಟೆಗಳನ್ನು ತೆರೆಯಲಾಗುವುದು. ಇದಕ್ಕಾಗಿ ಈಗಾಗಲೇ 815 ಮತಯಂತ್ರ ಹಾಗೂ 734 ವಿವಿ ಪ್ಯಾಟ್ ಯಂತ್ರಗಳನ್ನು ತರಿಸಿ ಪ್ರಥಮ ಹಂತದ ತಪಾಸಣೆ ಮುಗಿಸಲಾಗಿದೆ. ಚುನಾವಣೆಗಾಗಿ ಒಟ್ಟು 2608 ಮಂದಿ ಸಿಬ್ಬಂದಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News