ಹನೂರು: ಅಹವಾಲು ಸ್ವೀಕರಿಸಲು ಬಾರದ ಅಧಿಕಾರಿಗಳು; ಟವರ್ ಏರಿ ಪ್ರತಿಭಟಿಸಿದ ವ್ಯಾಪಾರಿ

Update: 2019-03-11 17:48 GMT

ಹನೂರು,ಮಾ.11: ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದ ವಿರುದ್ಧ ನಡೆಯುತ್ತಿದ್ದ ಎರಡನೇ ಹಂತದ ಧರಣಿಯ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಯೊಬ್ಬ ಟವರ್ ಏರಿ ಪ್ರತಿಭಟನೆ ಮಾಡಿದ ಘಟನೆ ನಡೆಯಿತು.

ಉಪವಾಸ ಸತ್ಯಾಗ್ರಹದ ಎರಡನೇ ದಿನವಾದ ಇಂದು ಸಹ ಯಾವುದೇ ಅಧಿಕಾರಿ ತಮ್ಮ ಅಹವಾಲುಗಳನ್ನು ಸ್ವೀಕರಿಸಲು ಬಾರದ ಕಾರಣ ಮನನೊಂದ ಗಿರೀಶ್ ಪಕ್ಕದಲ್ಲಿದ್ದ ಬಿಎಸ್ಎನ್ಎಲ್ ಟವರ್ ಏರಿ ನಮಗೆ ನ್ಯಾಯ ಸಿಗುವವರೆಗೂ ನಾನು ಇಳಿಯುವುದಿಲ್ಲ ಎಂದು ಪಟ್ಟು ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಟವರ್ ಹತ್ತಿ ನಾಲ್ಕೈದು ಗಂಟೆ ಕಳೆದರೂ ಸಹ ಪ್ರಾಧಿಕಾರದ ಯಾವುದೇ ಸಹಾಯಕ ಸ್ಥಳಕ್ಕೆ ಬಾರದಿದ್ದಕ್ಕೆ ಪ್ರತಿಭಟನಾ ನಿರತರು ಆಕ್ರೋಶಿತರಾದರು. ಈ ವೇಳೆ ಪೋಲೀಸರು ಮಧ್ಯ ಪ್ರವೇಶಿಸಿ ಪ್ರಾಧಿಕಾರದ ಆಡಳಿತ ಮಂಡಳಿ ಸಿಬ್ಬಂದಿ ರಮೇಶ್ ಎಂಬವರನ್ನು ಕರೆಸಿ ಹರಾಜು ಟೆಂಡರ್ ರದ್ದಾಗಿರುವುದನ್ನು ತಿಳಿಸಿದರು. ಬಳಿಕ ಪ್ರತಿಭಟನಾ ನಿರತರು ಟವರ್ ಮೇಲಿದ್ದ ಗಿರೀಶ್ ನ ಮನವೊಲಿಸಿ ಕೆಳಗಿಳಿಸಿದರು.

ಪೋಲಿಸ್ ಅಧಿಕಾರಿಗಳು ಹಾಗೂ ಪ್ರಾಧಿಕಾರದ ನೌಕರ ರಮೇಶ್ ರವರು ಮುಂದಿನ ದಿನಗಳಲ್ಲಿ ಹರಾಜು ಪ್ರಕ್ರಿಯೆಯ ಬಗ್ಗೆ ಮೇಲಾಧಿಕಾರಿಗಳ ಆದೇಶದಂತೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನೆಯನ್ನು ನಿಲ್ಲಿಸುವಂತೆ ತಿಳಿಸಿದರು. ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು.

ಸ್ಥಳದಲ್ಲಿ ಬೀದಿಬದಿ ವ್ಯಾಪಾರ ಸಂಘದ ಕಾರ್ಯದರ್ಶಿ ಬಿ.ಗೋವಿಂದ, ದಲಿತ ಅಭಿವೃದ್ದಿ ಸಂಘದ ಸದಸ್ಯ ಉತ್ತಂಭಳ್ಳಿ ಲಿಂಗಣ್ಣ, ಚಲವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಸುಶೀಲ, ದೇವಿ, ಸುನಿತ ಸೇರಿ ಅನೇಕರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News