×
Ad

ಲೋಕಸಭಾ ಚುನಾವಣೆ: ಕೋಲಾರ ಕ್ಷೇತ್ರದಲ್ಲಿ 16,12,227 ಮತದಾರರು- ಜಿಲ್ಲಾಧಿಕಾರಿ ಜೆ. ಮಂಜುನಾಥ್

Update: 2019-03-11 23:28 IST

ಕೋಲಾರ,ಮಾ,11: ಭಾರತ ಚುನಾವಣಾ ಆಯೋಗವು ಮಾರ್ಚ್ 10 ರಂದು ಲೋಕಸಭೆ ಚುನಾವಣೆ ದಿನಾಂಕಗಳನ್ನು ಪ್ರಕಟಿಸಿದ್ದು, ಅಂದಿನಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಕೋಲಾರ ಕ್ಷೇತ್ರದ ಲೋಕಸಭೆ ಚುನಾವಣೆ ಎಪ್ರಿಲ್ 18 ರಂದು ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಕೋಲಾರ ಲೋಕಸಭಾ ಮೀಸಲು ಕ್ಷೇತ್ರದ ಚುನಾವಣಾಧಿಕಾರಿ ಜೆ. ಮಂಜುನಾಥ್ ತಿಳಿಸಿದರು. 

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಕೋಲಾರ ಲೋಕಸಭಾ ವ್ಯಾಪ್ತಿಗೆ ಕೋಲಾರ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮತ್ತು ಚಿಂತಾಮಣಿ ವಿಧಾನಸಭೆ ಕ್ಷೇತ್ರಗಳು ಬರುತ್ತವೆ. ಲೋಕಸಭೆ ಕ್ಷೇತ್ರದಲ್ಲಿ ಒಟ್ಟು 16,12,227 ಮತದಾರರು ಇದ್ದಾರೆ. ಆದರೆ ಇದೇ ಅಂತಿಮವಲ್ಲ. ನಿನ್ನೆಯವರೆಗೆ ಬಂದಿರುವ ಅರ್ಜಿಗಳನ್ನು 10 ದಿನಗಳಲ್ಲಿ ಅಂತಿಮಗೊಳಿಸಿದರೆ ಅಂಕಿ ಅಂಶ ದೊರೆಯಲಿದೆ ಎಂದು ತಿಳಿಸಿದರು.

ಚುನಾವಣೆಗೆ ಅಧಿಸೂಚನೆ ಮಾರ್ಚ್ 19, ನಾಮಪತ್ರಗಳಗಳನ್ನು ಸಲ್ಲಿಸಲು ಕೊನೆಯ ದಿನ ಮಾರ್ಚ್ 26, ನಾಮಪತ್ರಗಳ ಪರಿಶೀಲನೆ ಮಾರ್ಚ್ 27, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮಾರ್ಚ್ 29, ಮತದಾನದ ದಿನಾಂಕ ಎ.18, ಮತಗಳ ಎಣಿಕೆಯ ದಿನಾಂಕ ಮೇ. 23 ಆಗಿರುತ್ತದೆ ಎಂದು ಮಾಹಿತಿ ನೀಡಿದರು.

ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಒಟ್ಟು 2,100 ಮತಗಟ್ಟೆಗಳಿದ್ದು, 476 ಸೂಕ್ಷ್ಮ ಮತಗಟ್ಟೆಗಳು, 1624 ಸಾಮಾನ್ಯ ಮತಗಟ್ಟೆಗಳು, ಕ್ಷೇತ್ರಕ್ಕೆ ಮತದಾನಕ್ಕಾಗಿ 2310 ವಿದ್ಯುನ್ಮಾನ ಮತಯಂತ್ರಗಳು ಹಾಗೂ ವಿವಿಪ್ಯಾಟ್‍ಗಳ ಅವಶ್ಯಕತೆಯಿದ್ದು, ಈಗಾಗಲೇ ಸ್ಟಾಕ್ ಇಡಲಾಗಿದೆ. ಮತದಾನ ಪ್ರಕ್ರಿಯೆಗೆ 10,079 ಸಿಬ್ಬಂದಿ ಅವಶ್ಯಕತೆಯಿದೆ. 186 ಸೆಕ್ಟರ್ ಅಧಿಕಾರಿಗಳು ಹಾಗೂ 120 ಇವಿಎಂ ಮಾಸ್ಟರ್ ಟ್ರೈನರ್ ಗಳನ್ನು ನೇಮಿಸಲಾಗಿದೆ ಎಂದರು. 

ಲೋಕಸಭಾ ಕ್ಷೇತ್ರಕ್ಕೆ ಒಟ್ಟು 42 ಪ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಲಾಗಿದೆ. 64 ಸ್ಟಾಟಿಕ್ ಸರ್ವೈಲನ್ಸ್ ತಂಡಗಳನ್ನು, 22 ವೀಡಿಯೋ ಸರ್ವೈಲನ್ಸ್ ಟೀಮ್‍ಗಳನ್ನು 8 ವೀಡಿಯೋ ವೀವಿಂಗ್ ಟೀಮ್‍ಗಳು ಹಾಗೂ 8 ಅಕೌಂಟಿಂಗ್ ಟೀಮ್‍ಗಳನ್ನು ರಚಿಸಲಾಗಿದೆ. ಈ ತಂಡಗಳು ಮಾದರಿ ನೀತಿ ಸಂಹಿತಿ ಉಲ್ಲಂಘನೆ ಕುರಿತು ನಿಗಾ ವಹಿಸಲಿವೆ ಎಂದು ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ 8054 ವಿಶೇಷ ಚೇತನ ಮತದಾರರನ್ನು ಗುರುತಿಸಲಾಗಿತ್ತು. ಈ ಬಾರಿ ವಿಶೇಷವಾಗಿ ಗಮನ ಹರಿಸಿ 14118 ವಿಶೇಷ ಚೇತನ ಮತದಾರರನ್ನು ಗುರುತಿಸಲಾಗಿದೆ. ವಿಶೇಷ ಚೇತನರು ಮತದಾನ ಮಾಡಲು ರ್ಯಾಂಪ್ ವ್ಯವಸ್ಥೆಯನ್ನು ಎಲ್ಲಾ ಮತಗಟ್ಟೆಗಳಲ್ಲಿ ಕಲ್ಪಿಸಲಾಗಿದೆ. ಇವರನ್ನು ಕರೆದುಕೊಂಡು ಒಂದು ಮತದಾನ ಮಾಡಿಸಲು ಪ್ರತಿ ಗ್ರಾಮ ಪಂಚಾಯತ್ ಗೆ 2 ಆಟೋಗಳು ಹಾಗೂ ನಗರಸಭೆಯ ಪ್ರತಿ ವಾರ್ಡ್‍ಗೆ ಒಂದು ಆಟೋವನ್ನು ಒದಗಿಸಲಾಗುವುದು ಎಂದು ತಿಳಿಸಿದರು. 

ಈ ಬಾರಿ ಶೇ.100 ರಷ್ಟು ಎಪಿಕ್ ಕಾರ್ಡ್‍ಗಳಲ್ಲಿ ಮತದಾರರ ಭಾವಚಿತ್ರವನ್ನು ಸೇರಿಸಲಾಗಿದೆ. ಮತದಾನ ಮಾಡಲು ಎಪಿಕ್ ಕಾರ್ಡ್ ಇಲ್ಲದಿದ್ದಲ್ಲಿ ಇತರೆ 11 ಗುರುತಿನ ಚೀಟಿಗಳನ್ನು ಬಳಸಬಹುದಾಗಿದೆ. ಎಪಿಕ್ ಕಾರ್ಡ್ ಹೊಂದಿದ್ದರೂ ಸಹ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ ಎಂದು ತಿಳಿಸಿದರು. 

ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆ ಜಾರಿಗೆ ಸಹಕಾರ ನೀಡಬೇಕು. ರಾಜಕೀಯ ಪಕ್ಷಗಳು ಭಿತ್ತಿಪತ್ರ ಮುದ್ರಿಸುವಾಗ ವೀಡಿಯೋ ಸರ್ಟಿಫಿಕೇಶನ್ ಸೆಲ್‍ನಲ್ಲಿ ಅನುಮತಿ ಪಡೆದುಕೊಳ್ಳಬೇಕು. ಯಾವುದೇ ಜಾತಿ, ಮತ, ಕೋಮು ಭಾವನೆ ಕೆರಳಿಸುವಂತಹ ವ್ಯಕ್ತಿಗತವಾಗಿ ನಿಂದಿಸುವಂತಹ ಭಿತ್ರಿಪತ್ರಗಳನ್ನು ಮುದ್ರಿಸಬಾರದು.ಭಿತ್ರಿಪತ್ರಗಳನ್ನು ಮುದ್ರಿಸುವಾಗ ಮುದ್ರಕನ ಹೆಸರು ಮುದ್ರಣದ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ತಿಳಿಸಿದರು.

ಚುನಾವಣಾ ಸಂಬಂದಿತ ದೂರುಗಳಿಗಾಗಿ ಕಂಟ್ರೋಲ್ ರೂಂ. ತೆರೆದಿದ್ದು, ಜಿಲ್ಲಾಧಿಕಾರಿಗಳ ಕಚೇರಿಯ ಟ್ರೋಲ್ ಫ್ರೀ ಸಂಖ್ಯೆ: 1950, 08152-243668, 08152-243507 ಗೆ ಶಿಡ್ಲಘಟ್ಟ 08158-256275, ಚಿಂತಾಮಣಿ-08154-252164, ಶ್ರೀನಿವಾಸಪುರ 9964726608, ಮುಳಬಾಗಿಲು 9964797877, ಕೆ.ಜಿ.ಎಫ್ -831012294, ಬಂಗಾರಪೇಟೆ 98444182902, ಕೋಲಾರ 7676496447 ಹಾಗೂ ಮಾಲೂರು 8123020297 ಗೆ ಕರೆಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ತಿಳಿಸಿದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಿ. ಜಗದೀಶ್ ಅವರು ಮಾತನಾಡಿ, ಮಾದರಿ ನೀತಿ ಸಂಹಿತೆ ಜಾರಿಯಾದ 24 ಗಂಟೆಯೊಳಗೆ ರಾಜಕೀಯ ಸಂಬಂಧಿತ ಬ್ಯಾನರ್ ಫ್ಲೆಕ್, ಪೋಸ್ಟರ್, ಗೋಡೆ ಬರಹಗಳನ್ನು ತೆರವುಗೊಳಿಸಲಾಗುವುದು. ಮುಂದೆ ಅನುಮತಿ ಪಡೆಯದೆ ಇವುಗಳನ್ನು ಹಾಕಿದರೆ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು. 

ಒಬ್ಬ ವ್ಯಕ್ತಿಯು 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಸಾಗಿಸುವಂತಿಲ್ಲ. 50 ಸಾವಿರಕ್ಕಿಂತ ಹೆಚ್ಚಿನ ಹಣ ಇದ್ದರೆ ಅದಕ್ಕೆ ದಾಖಲೆ ನೀಡಬೇಕು. ಸ್ಟಾರ್ ಕ್ಯಾಂಪೇನರ್ ಗಳು 1 ಲಕ್ಷದವರೆಗೆ ಹಣ ಇಟ್ಟುಕೊಳ್ಳಬಹುದಾಗಿದೆ. ಮಾದರಿ ನೀತಿ ಸಂಹಿತೆಯಿಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗಳಿಗೆ ಹಾಗೂ ಬರ ಸಂಬಂಧ ನಡೆಯುವ ಕೆಲಸಗಳಿಗೆ ವಿನಾಯಿತಿ ಇದೆ ಎಂದು ತಿಳಿಸಿದರು. 

ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸಫೆಟ್, ಕೆಜಿಎಫ್ ಎಸ್.ಪಿ ಕಾರ್ತಿಕ್ ರೆಡ್ಡಿ, ಅಪರ ಜಿಲ್ಲಾಧಿಕಾರಿಗಳಾದ ಹೆಚ್.ಪುಷ್ಪಲತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News