ನಾಲಗೆ ಮೀರಿ ಮಾತನಾಡಿದ್ದರಿಂದ ಮಂಡ್ಯದಲ್ಲಿ ಬೆಂಕಿ ಹತ್ತಿಕೊಂಡಿದೆ: ಶಾಸಕ ಎನ್.ಮಹೇಶ್

Update: 2019-03-11 18:12 GMT

ಮೈಸೂರು,ಮಾ.11: ವಿರೋಧ ಮಾಡುವ ಬರದಲ್ಲಿ ನಾಲಗೆ ಮೀರಿ ಮಾತನಾಡಿರುವುದರಿಂದ ಮಂಡ್ಯ ರಾಜಕಾರಣದಲ್ಲಿ ಬೆಂಕಿ ಹತ್ತಿಕೊಂಡಿದೆ ಎಂದು ಮಾಜಿ ಸಚಿವ ಎನ್.ಮಹೇಶ್ ಪರೋಕ್ಷವಾಗಿ ಸಚಿವ ಹೆಚ್.ಡಿ.ರೇವಣ್ಣ ಅವರ ವಿರುದ್ಧ ಕಿಡಿಕಾರಿದರು.

ನಗರದಲ್ಲಿ ಸೋಮವಾರ ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ಅವರು, ಮಂಡ್ಯದ ಜನ ಬಹಳ ಹೃದಯವಂತರು, ನೋಡಲಷ್ಟೆ ಅವರು ಒರಟು. ಅಲ್ಲಿ ಯಾರೇ ಚುನಾವಣೆಗೆ ನಿಲ್ಲಲಿ ಗೆಲುವನ್ನು ಜನ ತೀರ್ಮಾನಿಸುತ್ತಾರೆ. ಅದನ್ನು ಬಿಟ್ಟು ನಾವು ಮಾತನಾಡುವಾಗ ನಾಲಗೆಯನ್ನು ಹಿಡಿತದಲ್ಲಿ ಇಟ್ಟುಕೊಂಡು ಮಾತನಾಡಬೇಕು. ನಾಲಗೆ ಮೀರಿ ಮಾತನಾಡಿದ್ದರಿಂದ ಮಂಡ್ಯದಲ್ಲಿ ಬೆಂಕಿ ಹತ್ತಿಕೊಂಡಿದೆ ಎಂದು ಹೇಳಿದರು.

ರಾಜ್ಯದ ಬಹುತೇಕ ಕಡೆಗಳಲ್ಲಿ ಬಿಎಸ್ಪಿ ಸ್ಪರ್ಧೆ ಮಾಡಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ನಾವು ಏಕಾಂಗಿ ಹೋರಾಟ ಮಾಡುತ್ತೇವೆ. ಮೈಸೂರು, ಮಂಡ್ಯ, ಚಾಮರಾಜನಗರ ಲೋಕಸಭಾ ಕ್ಷೇತ್ರಗಳಿಗೆ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಈಗಾಗಲೇ ಅಭ್ಯರ್ಥಿಗಳ ಹುಡುಕಾಟ ಶುರುವಾಗಿದ್ದು ಸಮರ್ಥ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ ಎಂದು ಹೇಳಿದರು.

ಶಿವರಾಮ್ ಬಂದರೆ ಸ್ವಾಗತ: ನಿವೃತ್ತ ಐ.ಎ.ಎಸ್ ಅಧಿಕಾರಿ ಕೆ.ಶಿವರಾಮ್ ಬಿಎಸ್ಪಿ ಪಕ್ಷಕ್ಕೆ ಬಂದರೆ ಸ್ವಾಗತ ಮಾಡಲಾಗುವುದು ಎಂದು ಎನ್. ಮಹೇಶ್ ತಿಳಿಸಿದರು. ಅವರು ದೊಡ್ಡ ಪಕ್ಷದಲ್ಲಿರುವವರು ನಮ್ಮಂತ ಸಣ್ಣ ಪಕ್ಷಕ್ಕೆ ಬರುವುದಿಲ್ಲ. ಒಂದು ವೇಳೆ ಅವರು ಬಂದರೆ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಬೇಕೆ ಎಂದು ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News