ಪದ್ಮ ಪ್ರಶಸ್ತಿ ಪ್ರದಾನ

Update: 2019-03-11 18:21 GMT

ಮಲೆಯಾಳಂ ನಟ ಮೋಹನ್‌ಲಾಲ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್, ಅಕಾಲಿ ದಳದ ನಾಯಕ ಸುಖ್‌ದೇವ್ ಸಿಂಗ್ ಧಿಂಡ್ಸಾ ಹಾಗೂ ಖ್ಯಾತ ಪತ್ರಕರ್ತ ಕುಲದೀಪ್ ನಯ್ಯರ್ (ಮರಣೋತ್ತರ) ಸಹಿತ 47 ಪ್ರಮಖ ವ್ಯಕ್ತಿಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೋಮವಾರ ಪದ್ಮ ಪ್ರಶಸ್ತಿ ಪ್ರದಾನ ಮಾಡಿದರು. ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ಹಾಗೂ ಪ್ರಧಾನಿ ನರೇಂದ್ರ ಮೋದಿ, ಇತರರು ಪಾಲ್ಗೊಂಡ ವಿಶೇಷ ಕಾರ್ಯಕ್ರಮದಲ್ಲಿ ಬಿಹಾರ್ ನಾಯಕ ಹುಕುಮ್‌ದೇವ್ ನಾರಾಯಣ್ ಯಾದವ್ (ಪದ್ಮಭೂಷಣ), ಬಹುರಾಷ್ಟ್ರೀಯ ಕಂಪೆನಿ ಸಿಸ್ಕೊ ಸಿಸ್ಟಮ್ಸ್‌ನ ಮಾಜಿ ಸಿಇಒ ಜೋನ್ ಛೇಂಬರ್ಸ್‌ (ಪದ್ಮಭೂಷಣ), ಖ್ಯಾತ ನೃತ್ಯಪಟು ಹಾಗೂ ಚಿತ್ರ ನಿರ್ದೇಶಕ ಪ್ರಭುದೇವ್ (ಪದ್ಮಶ್ರೀ) ಅವರಿಗೆ ಕೂಡ ಪದ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಶ್ವನಾಥನ್ ಮೋಹನ್‌ಲಾಲ್, ಧಿಂಡ್ಸಾ ಹಾಗೂ ನಯ್ಯರ್ (ಮರಣೋತ್ತರ) ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಯ್ಯರ್ ಅವರ ಪತ್ನಿ ರಾಷ್ಟ್ರಪತಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಈ ವರ್ಷದ ಪದ್ಮ ಪ್ರಶಸ್ತಿಗೆ 112 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಗಣರಾಜ್ಯೋತ್ಸವದ ಸಂದರ್ಭ ಅವರ ಹೆಸರು ಪ್ರಕಟಿಸಲಾಗಿತ್ತು. ಇಂದು 47 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಿದ್ದು, ಉಳಿದವರಿಗೆ ಮಾರ್ಚ್ 16ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಇತರ ಪ್ರಶಸ್ತಿ ವಿಜೇತರಲ್ಲಿ ಖ್ಯಾತ ಗಾಯಕ ಶಂಕರ್ ಮಹಾದೇವನ್ ನಾರಾಯಣ (ಪದ್ಮಶ್ರೀ), ಲೋಕಸಭೆಯ ಮಾಜಿ ಉಪ ಸ್ಪೀಕರ್ ಕಾರಿಯಾ ಮುಂಡಾ (ಪದ್ಮಭೂಷಣ), ಫಿಸಿಶಿಯನ್‌ಗಳಾದ ಸಂದೀಪ್ ಗುಲೇರಿಯಾ ಹಾಗೂ ಇಲ್ಯಾಸ್ ಅಲಿ (ಇಬ್ಬರಿಗೂ ಪದ್ಮಭೂಷಣ) ಹಾಗೂ ಕುಸ್ತಿಪಟು ಬಜ್ರಂಗ್ ಪುನಿಯಾ (ಪದ್ಮಶ್ರೀ) ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor