×
Ad

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 16,90,483 ಮತದಾರರು: ಜಿಲ್ಲಾಧಿಕಾರಿ ಎನ್.ಮಂಜುಶ್ರೀ

Update: 2019-03-11 23:55 IST

ಮಂಡ್ಯ, ಮಾ.11: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮಾ,10ರಿಂದಲೇ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದೆ. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ, ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಗಳು ಸೇರಲಿದ್ದು, ಮಾ.19ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.26ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕವಾಗಿದ್ದು, ಮಾ.27ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂತೆಗೆದುಕೊಳ್ಳಲು ಮಾ.29 ಕಡೇ ದಿನವಾಗಿದ್ದು, ಎ.18ರಂದು ಮತದಾನ ನಡೆಯಲಿದೆ. ಮೇ 23ರಂದು ಮತ ಎಣಿಕೆ ನಡೆಯಲಿದ್ದು, ಚುನಾವಣೆ ನೀತಿ ಸಂಹಿತೆ ಮೇ 27ರವರಗೆ ಮುಂದುವರೆಯಲಿದೆ ಎಂದರು.

16 ಲಕ್ಷ ಮತದಾರರು: ಮಂಡ್ಯ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 16,90,483 ಮತದಾರರಿದ್ದಾರೆ. ಮಳವಳ್ಳಿ 2,39,831, ಮದ್ದೂರು 2,06,403, ಮೇಲುಕೋಟೆ 1,94,906, ಮಂಡ್ಯ 2,23,275, ಶ್ರೀರಂಗಪಟ್ಟಣ 2,09,204, ನಾಗಮಂಗಲ 2,06,859, ಕೆ.ಆರ್.ಪೇಟೆ 2,05,285, ಕೆ.ಆರ್.ನಗರ 2,04,720, ಇತರೆ 112 ಹಾಗೂ 798 ಸೇವಾ ಮತದಾರರಿದ್ದಾರೆ. ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಇನ್ನೂ ಕಾಲಾವಕಾಶವಿದೆ ಎಂದು ಹೇಳಿದರು.

8 ಸಹಾಯಕ ಚುನಾವಣಾಧಿಕಾರಿಗಳ ನೇಮಕ: ಮಳವಳ್ಳಿ ವಿಧಾನಸಭಾ ಕ್ಷೇತ್ರ ವಿಶೇಷ ಭೂಸ್ವಾಧೀನಾಧಿಕಾರಿ, ಮದ್ದೂರು ಕ್ಷೇತ್ರಕ್ಕೆ ಮೂಡಾ ಆಯುಕ್ತ, ಮೇಲುಕೋಟೆ ಕ್ಷೇತ್ರಕ್ಕೆ ಉಪವಿಭಾಗಾಧಿಕಾರಿ, ಮಂಡ್ಯಕ್ಕೆ ಉಪವಿಭಾಗಾಧಿಕಾರಿ, ಶ್ರೀರಂಗಪಟ್ಟಣಕ್ಕೆ ಜಿಪಂ ಉಪಕಾರ್ಯದರ್ಶಿ-2, ನಾಗಮಂಗಲಕ್ಕೆ ಜಿಪಂ ಉಪಕಾರ್ಯದರ್ಶಿ-1, ಕೆ.ಆರ್.ಪೇಟೆಗೆ ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಕೆ.ಆರ್.ನಗರಕ್ಕೆ ಕಬಿನ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಹೇಳಿದರು.

ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ: ಚುನಾವಣಾ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿವಿ ಪ್ಯಾಟ್ ಬಳಕೆ: ಚುನಾವಣೆಯನ್ನು ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವ ದೃಷ್ಟಿಯಿಂದ ಇವಿಎಂ ಜೊತೆಗೆ ವಿವಿ ಪ್ಯಾಟ್‍ಗಳನ್ನು ಬಳಸಲಾಗುತ್ತಿದೆ. ಮತದಾರರು ಅಭ್ಯರ್ಥಿಗಳನ್ನು ಗುರುತಿಸಲು ಬ್ಯಾಲೆಟ್ ಯೂನಿಟ್‍ಗಳಲ್ಲಿ ಅಳವಡಿಸುವ ಮತಪತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರ ಮುದ್ರಿಸಲು ಕ್ರಮ ವಹಿಸಲಾಗಿದ್ದು, ಮತದಾರರ ಯಾವ ಅಭ್ಯರ್ಥಿಗೆ ಮತದಾನ ಮಾಡಿದ್ದಾನೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ ಎಂದರು.

ಉಚಿತ ಸಹಾಯವಾಣಿ: ಮತದಾರರ ನೋಂದಣಿ, ಅರ್ಜಿಯ ಸ್ಥಿತಿ, ಚುನಾವಣೆಗೆ ಸಂಬಂಧಿಸಿದ ಕುಂದು ಕೊರತೆಗಳ ನಿವಾರಣೆಗೆ ಉಚಿತ ಸಹಾಯವಾಣಿ ಕೇಂದ್ರ ತೆರೆಯಲಾಗಿದ್ದು, ಸಾರ್ವಜನಿಕರು 1950 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಅಕ್ರಮ ಚಟುವಟಿಕೆ ತಡೆಗಟ್ಟಲು ಸಿ-ವಿಜಿಲ್ ಮೊಬೈಲ್ ಆಪ್‍ನ್ನು ಮೊದಲ ಬಾರಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯಾದ್ಯಂತ ಭದ್ರತೆ: ಎಎಸ್‍ಪಿ ಬಲರಾಮೇಗೌಡ ಮಾತನಾಡಿ, ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ರೌಡಿಗಳ ಪರೇಡ್ ನಡೆಸಿ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ನೀಡಲಾಗಿದೆ. ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಕ್ರಮ ಹಣ ಹಾಗೂ ಮದ್ಯ ಸಾಗಾಟವನ್ನು ತಡೆಗಟ್ಟಲು ಜಿಲ್ಲೆಯಾದ್ಯಂತ ಸುಮಾರು 26 ಚೆಕ್‍ಪೋಸ್ಟ್‍ಗಳನ್ನು ತೆರೆಯಲಾಗಿದೆ ಎಂದರು.

ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರೂಪಾ ಹಾಗು ಜಿಪಂ ಸಿಇಒ ಕೆ.ಯಾಲಕ್ಕಿಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News