ದರೋಡೆ ಪ್ರಕರಣ: ಇಬ್ಬರು ಆರೋಪಿಗಳಿಗೆ 7 ವರ್ಷ ಕಠಿಣ ಶಿಕ್ಷೆ
ತುಮಕೂರು,ಮಾ.12: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ದರೋಡೆ ಮಾಡಿದ ಆರೋಪದ ಮೇಲೆ ಸೈಯದ್ ಆಸಿಫುಲ್ಲಾ ಹಾಗೂ ರಫೀಕ್ ಖಾನ್ ಎಂಬುವವರಿಗೆ 7ವರ್ಷಗಳ ಕಠಿಣ ಶಿಕ್ಷೆ ಹಾಗೂ ತಲಾ 10 ಸಾವಿರ ರೂ.ಗಳ ದಂಡವನ್ನು ವಿಧಿಸಿ ತೀರ್ಪು ನೀಡಿದೆ.
ಆರೋಪಿಗಳು ಶಿರಾ ತಾಲೂಕು ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2015ರ ಫೆಬ್ರವರಿ 17ರಂದು ಎನ್‍ಹೆಚ್ ರಸ್ತೆ-48ರಲ್ಲಿ ಮಧ್ಯರಾತ್ರಿ ಚಾಕುವಿನಿಂದ ಬೆದರಿಸಿ ಗ್ಯಾಸ್ ಟ್ಯಾಂಕರ್ ಲಾರಿ ಚಾಲಕ ಸತೀಶ್ ಕುಮಾರ್ ಅವರಿಂದ 5200 ರೂ. ಹಣ ಹಾಗೂ ಒಂದು ಮೊಬೈಲ್ ಅನ್ನು ಕಿತ್ತುಕೊಂಡು ಹೋಗಿದ್ದರು ಎಂದು ವಿಚಾರಣೆಯಿಂದ ಸಾಭೀತಾಗಿದೆ. ಪ್ರಕರಣದ ಬಗ್ಗೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಿಂದಿನ ತನಿಖಾಧಿಕಾರಿ ಕುಮಾರಪ್ಪ ಅವರು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ದರೋಡೆ ಮಾಡಿದ್ದ ಮಾಲುಗಳನ್ನು ಅಮಾನತ್ತುಪಡಿಸಿದ್ದರು. ನಂತರ ತನಿಖಾಧಿಕಾರಿ ರಾಮಕೃಷ್ಣಯ್ಯ ಅವರು ತನಿಖೆಯನ್ನು ಮುಂದುವರೆಸಿ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಸಾಕ್ಷ್ಯಾಧಾರಗಳಿಂದ ಆರೋಪ ರುಜುವಾತಾದ ಕಾರಣ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಂದ್ರ ಬಾದಾಮಿಕರ್ ಅವರು ಈ ಕಠಿಣ ಶಿಕ್ಷೆಯನ್ನು ವಿಧಿಸಿದ್ದಾರೆ. ಪ್ರಧಾನ ಸರ್ಕಾರಿ ಅಭಿಯೋಜಕಿ ಕೆ.ಎಚ್. ಶ್ರೀಮತಿ ವಾದ ಮಂಡಿಸಿದ್ದರು.