ಮಾದರಿ ನೀತಿ ಸಂಹಿತೆ ಪಾಲಿಸಿ: ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ

Update: 2019-03-12 12:54 GMT

ಮಡಿಕೇರಿ, ಮಾ.12: ಲೋಕಸಭೆ ಚುನಾವಣೆ ಹಿನ್ನೆಲೆ ಚುನಾವಣಾ ಆಯೋಗದ ನಿರ್ದೇಶನದಂತೆ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.   

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. 
ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಪಾಲಿಸುವ ಸಂಬಂಧ ಹಲವು ನಿರ್ದೇಶನಗಳನ್ನು ನೀಡಿದೆ. ಅದನ್ನು ಚಾಚು ತಪ್ಪದೇ ಪಾಲಿಸಬೇಕು ಎಂದರು. 

ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ ಮತ್ತು ಬ್ಯಾನರ್ ಅಳವಡಿಸಬಾರದು. ಅಳವಡಿಸಬೇಕಿದ್ದಲ್ಲಿ ಅನುಮತಿ ಪಡೆಯಬೇಕು. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಕರಪತ್ರ, ಪೋಸ್ಟರ್, ಜಾಹೀರಾತು ಮತ್ತಿತರ ಮುದ್ರಣ ಮಾಡುವ ಮೊದಲು ಅನುಮತಿ ಪಡೆಯಬೇಕು. ಎಷ್ಟು ಪ್ರತಿ ಮುದ್ರಣ ಮಾಡಲಾಗುತ್ತಿದೆ ಮತ್ತು ವೆಚ್ಚದ ಬಗ್ಗೆ ವಿವರ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.  

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್ ಚುನಾವಣೆಗೆ ಸಂಬಂಧಿಸಿದಂತೆ ಬ್ಯಾನರ್, ಪೋಸ್ಟರ್ ಗಳನ್ನು ಎಲ್ಲೆಂದರಲ್ಲಿ ಅಳವಡಿಸುವಂತಿಲ್ಲ ಎಂದು ತಿಳಿಸಿದರು. 

ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್, ರಾಜಕೀಯ ಪಕ್ಷಗಳ ಪ್ರಮುಖರಾದ ಸಜಿಲ್ ಕೃಷ್ಣ(ಬಿಜೆಪಿ), ತೆನ್ನಿರಾ ಮೈನಾ(ಕಾಂಗ್ರೇಸ್) ಇತರರು ಇದ್ದರು. 

ಮಾಹಿತಿ ನೀಡಲು ಕೋರಿಕೆ: ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಸ್ವೀಕೃತವಾಗುವ ದೂರು ಅರ್ಜಿಗಳ ತ್ವರಿತ ಕ್ರಮಕ್ಕಾಗಿ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ತಯಾರಿಕೆ, ದಾಸ್ತಾನು, ಮಾರಾಟ ಮತ್ತು ಸಾಗಾಣಿಕೆ ಮತ್ತಿತರ ಅಬಕಾರಿ ಅಕ್ರಮಗಳ ಸಂಬಂಧ ಸಾರ್ವಜನಿಕರು ಅಬಕಾರಿ ಇಲಾಖೆಗೆ ದೂರು ನೀಡಲು ಅಬಕಾರಿ ಆಯುಕ್ತರು, ಕರ್ನಾಟಕ ರಾಜ್ಯ, ಬೆಂಗಳೂರು ರವರ ಕಚೇರಿ ಟೋಲ್ ಫ್ರೀ ಸಂಖ್ಯೆ : 1-800-425-2550ಗೆ ಕರೆ ಮಾಡಲು ಹಾಗೂ ಅಬಕಾರಿ ಉಪ ಆಯುಕ್ತರು, ಕೊಡಗು ಜಿಲ್ಲೆ, ಮಡಿಕೇರಿ ರವರ ಕಂಟ್ರೋಲ್ ರೂಂ ದೂ.ಸಂ :08272-229295 ಗೆ ದೂರು ಸಲ್ಲಿಸಬಹುದಾಗಿದೆ ಎಂದು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News