ಬಾಗೇಪಲ್ಲಿ: ವಿದ್ಯುತ್ ತಂತಿ ತಗುಲಿ ಗ್ರಾ.ಪಂ ನೌಕರ ಮೃತ್ಯು

Update: 2019-03-12 13:05 GMT

ಬಾಗೇಪಲ್ಲಿ,ಮಾ,12: ವಿದ್ಯುತ್ ತಂತಿ ತಗುಲಿ ಗ್ರಾ.ಪಂ ನೌಕರರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಗೂಳೂರು ನಲ್ಲಪರೆಡ್ಡಿಪಲ್ಲಿ ಗ್ರಾಮದಲ್ಲಿ ನಡೆದಿದೆ.

ನಲ್ಲಪರೆಡ್ಡಿಪಲ್ಲಿ ಗ್ರಾಮದ ವೆಂಕಟರೆಡ್ಡಿ(50) ಮೃತ ವ್ಯಕ್ತಿ. ಇವರು ನೀರು ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ. 

ಮಂಗಳವಾರ ಮದ್ಯಾಹ್ನ 2 ಗಂಟೆ ಸಮಯದಲ್ಲಿ ಗ್ರಾಮಕ್ಕೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಪೀಝ್  ಹಾಕುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ವೆಂಕಟರೆಡ್ಡಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ತಾ.ಪಂ ಇಒ ಸಿ.ಶ್ರೀನಿವಾಸ್, ಗ್ರಾ.ಪಂ ಅಧ್ಯಕ್ಷೆ ಕವಿತಾ ಶ್ರೀನಿವಾಸರೆಡ್ಡಿ, ಉಪಾಧ್ಯಕ್ಷೆ ಉಮಾದೇವಿ ನಾಗರಾಜು, ಪಿಡಿಒಗಳಾದ ಸುವರ್ಣ, ನಾರಾಯಣ, ನೋಡಲ್ ಅಧಿಕಾರಿ ರಂಗಪ್ಪ, ಗ್ರಾ.ಪಂನ ಸದಸ್ಯರು ಬೇಟಿ ನೀಡಿದರು.

ನಲ್ಲಪರೆಡ್ಡಿಪಲ್ಲಿ ಗ್ರಾ.ಪಂ ನೌಕರನೊಬ್ಬ ವಿದ್ಯುತ್ ತಂತಿ ತಗುಲಿ ಮೃತಪಟ್ಟಿರುವುದು ಗಮನಕ್ಕೆ ಬಂದ ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು.

-ನಹೀದ್ ಪಾಷ, ಎಇಇ, ಬೆಸ್ಕಾಂ ಇಲಾಖೆ ಬಾಗೇಪಲ್ಲಿ

ಬೆಸ್ಕಾಂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮ್ಮ ಗ್ರಾ.ಪಂ ನೌಕರ ಮೃತಪಟ್ಟಿದ್ದಾನೆ. ವಿದ್ಯುತ್ ಇಲ್ಲದ ಕಾರಣ ನೀರಿನ ಸಮಸ್ಯೆಯಾಗಿತ್ತು. ಮೃತಪಟ್ಟಿರುವ ವ್ಯಕ್ತಿಯ ಕುಟುಂಬಕ್ಕೆ ಸಹಾಯ ಮಾಡಲಾಗಿದೆ. ಅನುಕಂಪದ ಆಧಾರದ ಮೇಲೆ ಅವರ ಕುಟುಂಬದಲ್ಲಿ ಒಬ್ಬರಿಗೆ ನೌಕರಿ ನೀಡಲಾಗುವುದು.
-ಸಿ.ಶ್ರೀನಿವಾಸ್, ತಾ.ಪಂ ಕಾರ್ಯನಿರ್ವಹಾಣಾಧಿಕಾರಿ ಬಾಗೇಪಲ್ಲಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News