ಪಿಯುಸಿ ಮೌಲ್ಯಮಾಪನ ಸಾಮೂಹಿಕ ಬಹಿಷ್ಕಾರ: ಉಪನ್ಯಾಸಕರ ಎಚ್ಚರಿಕೆ

Update: 2019-03-12 13:16 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.12: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.21 ರಿಂದ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಅಹೋರಾತ್ರಿ ಧರಣಿ ಪ್ರಾರಂಭಿಸಲಿದ್ದು, ಮಾ.23ರಿಂದ ಆರಂಭವಾಗಲಿರುವ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಗಳ ಮೌಲ್ಯಮಾಪನವನ್ನು ಸಾಮೂಹಿಕವಾಗಿ ಬಹಿಷ್ಕಾರ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಉಪನ್ಯಾಸಕರು ಎಚ್ಚರಿಕೆ ನೀಡಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ರಾಜ್ಯ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ತಿಮ್ಮಯ್ಯಪುರ್ಲೆ, ದ್ವಿತೀಯ ಪಿಯುಸಿ ಮೌಲ್ಯಮಾಪನಕ್ಕೆ ಸಾಮೂಹಿಕ ಗೈರು ಹಾಜರಾಗುವ ಹಾಗೂ ಈ ತಿಂಗಳ 21ರಿಂದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸ್ವಾತಂತ್ರ ಉದ್ಯಾನವನದಲ್ಲಿ ಅಹೋರಾತ್ರಿ ಧರಣಿ ನಡೆಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪದವಿ ಪೂರ್ವ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ವರ್ಷಗಳಿಂದ ಸರಕಾರದ ಗಮನಕ್ಕೆ ತಂದರೂ ಇದುವರೆಗೂ ತಮ್ಮ ಬೇಡಿಕೆಗಳು ಈಡೇರಿಲ್ಲ. ಹೀಗಾಗಿ ಅನಿವಾರ್ಯವಾಗಿ ಧರಣಿ ಮತ್ತು ಮೌಲ್ಯಮಾಪನಕ್ಕೆ ಸಾಮೂಹಿಕ ಗೈರು ಹಾಜರಾಗುವ ತೀರ್ಮಾನವನ್ನು ಕೈಗೊಳ್ಳಬೇಕಾಯಿತು ಎಂದು ಹೇಳಿದರು.

ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜಿಗೆ ಭಡ್ತಿ ಪಡೆದಿರುವವರಿಗೆ 15 ಮತ್ತು 20 ವರ್ಷದ ಟೈಂ ಬಾಂಡ್ ಭಡ್ತಿ ನೀಡಿಲ್ಲ. ಕಾಲ್ಪನಿಕ ವೇತನ ಜಾರಿಯಾಗಿಲ್ಲ. ವೇತನ ತಾರತಮ್ಯ ಸರಿಯಾಗಿಲ್ಲ. ಈ ಎಲ್ಲ ಬೇಡಿಕೆಗಳನ್ನು ಇಟ್ಟುಕೊಂಡು ಈ ಮಾ. 21ರಿಂದ ಪ್ರತಿಭಟನೆ ಆರಂಭಿಸುತ್ತಿವೆ ಎಂದರು.

ಈ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲ ಪದವಿ ಪೂರ್ವ ಉಪನ್ಯಾಸಕರು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ಮೌಲ್ಯಮಾಪನಕ್ಕೆ ಗೈರು ಹಾಜರಾಗುವುದರಿಂದ ಎದುರಾಗುವ ಸಮಸ್ಯೆಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯೇ ಹೊಣೆ ಎಂದು ಅವರು ಹೇಳಿದರು.

ಉಪನ್ಯಾಸಕರಿಗೂ ಬೇಸಿಗೆ ರಜೆ ಸಿಗಲಿ: ಪಿಯುಸಿ ಉಪನ್ಯಾಸಕರಿಗೆ ರಜೆ ಕಡಿತ ಮಾಡಲಾಗಿದೆ. ಇದು ಸರಿಯಲ್ಲ. 1976 ರಲ್ಲಿ ಇದ್ದಂತೆ ಪ್ರತಿ ಶೈಕ್ಷಣಿಕ ವರ್ಷವೂ ಮೇ 28ರಿಂದ ಆರಂಭವಾಗಬೇಕು. ಆದರೆ ಕಳೆದ ವರ್ಷದಿಂದ ಮೇ 2 ರಿಂದಲೇ ತರಗತಿಗಳು ಆರಂಭವಾಗುತ್ತಿವೆ. ಹೀಗಾಗಿ, ಏಪ್ರಿಲ್ ಮತ್ತು ಮೇ ತಿಂಗಳಿಗೆ ಬೇಸಿಗೆ ರಜೆ ಸೌಲಭ್ಯವನ್ನು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ನೀಡಬೇಕು. ಮೇ ಮೊದಲ ವಾರದಿಂದಲೇ ಪಿಯುಸಿ ತರಗತಿ ಆರಂಭಿಸುವುದಾದರೆ ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ತಕ್ಷಣವೇ ರಜೆ ರಹಿತ ಎಂದು ಆದೇಶ ಹೊರಡಿಸಲಿ ಎಂದು ತಿಮ್ಮಯ್ಯಪುರ್ಲೆ ಆಗ್ರಹಿಸಿದರು.

ಸಭೆಯಲ್ಲಿ ಪದವಿ ಪೂರ್ವ ಉಪನ್ಯಾಸಕರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಚ್. ನಿಂಗೇಗೌಡ, ಕಾರ್ಯದರ್ಶಿ ಎಸ್.ಆರ್.ವೆಂಕಟೇಶ್, ಕೋಶಾಧ್ಯಕ್ಷ ಎಂ.ಜಯಣ್ಣ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಅಧ್ಯಕ್ಷರುಗಳು ಉಪಸ್ಥಿತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News