ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಸಂಸದ ಪ್ರಹ್ಲಾದ್ ಜೋಷಿ?
ಧಾರವಾಡ, ಮಾ.12: ಲೋಕಸಭಾ ಚುನಾವಣೆಯ ಹಿನ್ನೆಲೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರೂ, ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಹಾಗೂ ಶಾಸಕ ಅರವಿಂದ್ ಬೆಲ್ಲದ ಅವರು, ಕತ್ತಿ ಹಿಡಿದ ಫೋಟೋವನ್ನು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ನೀತಿ ಸಂಹಿತೆ ನಿಯಮ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.
ಪ್ರಹ್ಲಾದ್ ಜೋಶಿ ಮತ್ತು ಅರವಿಂದ ಬೆಲ್ಲದ ಕೈಯಲ್ಲಿ ಕತ್ತಿ ಹಿಡಿದ ಫೋಟೋವನ್ನು ಬಿಜೆಪಿ ಪಕ್ಷದ ಕಾರ್ಯಕರ್ತರೊಬ್ಬರು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಯಾವುದೇ ಆಯುಧ ಪ್ರದರ್ಶಿಸಬಾರದು. ಆಯುಧ ಹಿಡಿದ ಫೋಟೋ ಕೂಡ ಸಾರ್ವಜನಿಕವಾಗಿ ಹಂಚಿಕೊಳ್ಳುವುದು ತಪ್ಪು. ಆದರೆ, ಬಿಜೆಪಿ ಕಾರ್ಯಕರ್ತ, ಜೋಶಿ ಹಾಗೂ ಅರವಿಂದ ಬೆಲ್ಲದ ತಲ್ವಾರ್ ಹಿಡಿದ ಫೋಟೋ ಹಾಕಿ ಮತ್ತೊಮ್ಮೆ ನಾವೇ ಗೆಲ್ಲೋದು ಎಂದು ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.
ಎರಡು ದಿನಗಳ ಹಿಂದೆ ಧಾರವಾಡದ ಖಾಸಗಿ ಹೊಟೇಲ್ ಗೆ ಬಂದಾಗ ಜನಪ್ರತಿನಿಧಿಗಳು ಕತ್ತಿ ಹಿಡಿದು ಫೋಟೋ ಹಿಡಿಸಿದ್ದರು. ಅದೇ ಫೋಟೋವನ್ನು ನೀತಿ-ಸಂಹಿತೆ ಜಾರಿಯಾದ ಬಳಿಕ ಕಾರ್ಯಕರ್ತರು ಪೋಸ್ಟ್ ಮಾಡಿ ಚುನಾವಣಾ ಆಯೋಗದ ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.