ಮಂಡ್ಯ: ವಿವಾದಾತ್ಮಕ ಹೇಳಿಕೆ, ನಿಖಿಲ್‍ ಸ್ಪರ್ಧೆ ಖಂಡಿಸಿ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಅಂತ್ಯ

Update: 2019-03-12 17:05 GMT

ಮಂಡ್ಯ,ಮಾ.12: ಜೆಡಿಎಸ್ ನಾಯಕರ ವಿವಾದಾತ್ಮಕ ಹೇಳಿಕೆ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್‍ ಕುಮಾರ್ ಸ್ಪರ್ಧೆ ವಿರೋಧಿಸಿ ಅಖಿಲ ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಡಾ.ರವೀಂದ್ರ ಅವರು ನಡೆಸುತ್ತಿದ್ದ ಮೂರು ದಿನಗಳ ಉಪವಾಸ ಸತ್ಯಾಗ್ರಹ ಮಂಗಳವಾರ ಅಂತ್ಯಗೊಂಡಿತು.

ಸ್ವಾಭಿಮಾನಕ್ಕಾಗಿ ಹಾಗೂ ಜಿಲ್ಲೆಯ ಅಸ್ಮಿತೆಗಾಗಿ ನಗರದ ಸರ್‍ಎಂವಿ ಪ್ರತಿಮೆ ಮುಂಭಾಗ ನಡೆಯುತ್ತಿದ್ದ ಉಪವಾಸ ಸತ್ಯಾಗ್ರಹ ಸಂಜೆ 4 ಗಂಟೆಗೆ ಅಭಿಮಾನಿಗಳಿಂದ ಎಳನೀರು ಹಾಗೂ ಸಿಹಿ ಸ್ವೀಕರಿಸುವ ಮೂಲಕ ಕೊನೆಗೊಂಡಿತು. 

ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿದ ನಟಿ ಸುಮಲತಾ ಸುಮಾರು 25 ನಿಮಿಷಗಳ ಕಾಲ ಧರಣಿಯಲ್ಲಿ ಭಾಗವಹಿಸಿ ಮಾತುಕತೆ ನಡೆಸಿ, ಬೆಂಬಲ ಸೂಚಿಸಿದರು.
ಡಾ.ರವೀಂದ್ರ ಮಾತನಾಡಿ, ಜಿಲ್ಲೆಯು ಕೆ.ವಿ.ಶಂಕರಗೌಡ, ಎಂ.ಕೆ.ಶಿವನಂಜಪ್ಪ, ಎಚ್.ಕೆ.ವೀರಣ್ಣಗೌಡ, ಎಸ್.ಎಂ.ಕೃಷ್ಣ, ಜಿ.ಮಾದೇಗೌಡ, ಎಸ್.ಡಿ.ಜಯರಾಂ, ಸಿಂಗಾರಿಗೌಡರಂತಹ ದೊಡ್ಡ ನಾಯಕರನ್ನು ನೀಡಿದೆ. ಇಂತಹ ಜಿಲ್ಲೆಯ ಒಬ್ಬ ಹೆಣ್ಣು ಮಗಳಿಗೆ ಜೆಡಿಎಸ್ ನಾಯಕರು ಅವಮಾನಿಸುತ್ತಿರುವುದು ಸರಿಯಲ್ಲ. ಆದ್ದರಿಂದ ಜಿಲ್ಲೆಯ ಆಸ್ಮಿತೆಯ ಉಳಿವಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದರು.

ಸ್ವಾಭಿಮಾನದ ಜಿಲ್ಲೆಗೆ ನಿಮ್ಮಂತ ಹೆಣ್ಣು ಮಗಳ ಅವಶ್ಯಕತೆ ಇದೆ. ನೀವು ಇಟ್ಟಿರುವ ಹೆಜ್ಜೆಯನ್ನು ಹಿಂದಕ್ಕೆ ತೆಗೆಯಬೇಡಿ. ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ. ಕೊನೆವರೆಗೂ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಂಬರೀಶ್ ಅಭಿಮಾನಿಗಳು ನಿಮ್ಮ ಗೆಲುವಿಗೆ ಶ್ರಮಿಸುತ್ತೇವೆ. ನೀವು ಸ್ಪರ್ಧಿಸಬೇಕು ಎಂದು ಮನವಿ ಮಾಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ನಟಿ ಸುಮಲತಾ, ನಾನು ರಾಜಕೀಯಕ್ಕೆ ಬಂದು ಏನೋ ಮಾಡಿಬಿಡುತ್ತೇನೆ ಎಂದು ಹೇಳುತ್ತಿಲ್ಲ. ಅಂಬರೀಶ್ ಅಭಿಮಾನ ಹಾಗೂ ಜಿಲ್ಲೆಯ ಜನರ ಪ್ರೀತಿಯ ಋಣ ತೀರಿಸಲು ಮುಂದಾಗಿದ್ದೇನೆ. ನನ್ನ ಕೈಲಾದ ಎಲ್ಲ ರೀತಿಯ ಸಹಾಯವನ್ನು ಜನತೆಗೆ ಮಾಡುವ ಹಂಬಲದಿಂದ ರಾಜಕೀಯಕ್ಕೆ ಬರಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

ಬೇರೆಯವರು ಏನೇ ಮಾತನಾಡಿದರೂ, ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಜನರ ಪ್ರೀತಿ, ವಿಶ್ವಾಸ ಇರುವವರೆಗೂ ನಾನು ನಿಮ್ಮ ಜೊತೆಯಲ್ಲಿರುತ್ತೇನೆ. ಬೇರೆಯವರು ಮಾತನಾಡುತ್ತಾರೆ ಎಂದು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಯಾವುದೇ ಉದ್ವೇಗಕ್ಕೆ ಒಳಗಾಗದೇ ತಾಳ್ಮೆಯಿಂದಿರಬೇಕು. ನಾನು ಅಧಿಕೃತವಾಗಿ ಘೋಷಣೆ ಮಾಡುವವರೆಗೂ ಎಲ್ಲವೂ ನಿಜವಲ್ಲ. ಬೇರೆ ಬೇರೆ ರೀತಿಯ ಸುದ್ದಿಗಳು ಹರಿದಾಡುತ್ತಿದೆ. ಅಂತಹ ಸುದ್ದಿಗಳಿಗೆ ಕಿವಿಗೊಡಬೇಡಿ, ಶೀಘ್ರದಲ್ಲಿಯೇ ಅಭಿಮಾನಿಗಳಿಗೆ ಹಾಗೂ ಕಾರ್ಯಕರ್ತರಿಗೆ ನೋವಾಗದಂತೆ ನಿರ್ಧಾರ ಪ್ರಕಟಿಸುತ್ತೇನೆ ಎಂದು ಭರವಸೆ ನೀಡಿದರು.

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ನಿಮ್ಮ ಸಮಸ್ಯೆ, ಪ್ರಶ್ನೆಗಳಿಗೆ ನಾನು ಸದಾ ಸ್ಪಂದಿಸುತ್ತೇನೆ. ಸದಾ ಸಂಪರ್ಕದಲ್ಲಿರಿ. ಯಾವುದೇ ಸಮಸ್ಯೆಗೂ ತಕ್ಷಣ ಸ್ಪಂದಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಂಬರೀಷ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್, ನಗರಸಭೆ ಮಾಜಿ ಸದಸ್ಯ ಅನಿಲ್‍ ಕುಮಾರ್, ಸುಂಡಹಳ್ಳಿ ಮಂಜುನಾಥ್, ಜಿ.ಬಿ.ನವೀನ್‍ಕುಮಾರ್  ಸೇರಿದಂತೆ ಅನೇಕ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News