ಹಂದಿಗಳನ್ನು ಬೇರೆಡೆಗೆ ಸ್ಥಳಾಂತರಿಸಿದ ಪ್ರಕರಣ: ಆದೇಶ ಕಾಯ್ದಿರಿಸಿದ ಹೈಕೋರ್ಟ್

Update: 2019-03-12 17:25 GMT

ಬೆಂಗಳೂರು, ಮಾ.12: ದಾವಣಗೆರೆ ಮಹಾನಗರ ಪಾಲಿಕೆಯ ವಾರ್ಡ್‌ಗಳ ವ್ಯಾಪ್ತಿಯಲ್ಲಿದ್ದ ಹಂದಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ವಿಚಾರಣೆಯನ್ನು ಪೂರ್ಣಗೊಳಿಸಿ ಆದೇಶವನ್ನು ಕಾಯ್ದಿರಿಸಿತು.

ಈ ಸಂಬಂಧ ಅಖಿಲ ಕರ್ನಾಟಕ ಕುಳುವ ಮಹಾಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಆನಂದಕುಮಾರ್ ಏಕಲವ್ಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲೆ ಶೃತಿ ಅವರು, ದಾವಣಗೆರೆ ಮಹಾನಗರ ಪಾಲಿಕೆಯ ವಾರ್ಡ್‌ಗಳಲ್ಲಿ ವಾಸವಾಗಿದ್ದ 4 ರಿಂದ 5 ಸಾವಿರ ಹಂದಿಗಳನ್ನು ಪಾಲಿಕೆಯ ಆಯುಕ್ತರ ಆದೇಶದ ಮೇರೆಗೆ ದಾವಣಗೆರೆ ಜಿಲ್ಲೆಯ ಹೊರ ವಲಯಕ್ಕೆ ಸ್ಥಳಾಂತರಿಸಿದ್ದಾರೆ. ಇದರಿಂದ, ಹಂದಿಗಳನ್ನು ಸಾಕಿಕೊಂಡು ಜೀವನ ಸಾಗಿಸುತ್ತಿದ್ದ ಹಂದಿಯ ಮಾಲಕರು ಇಂದು ಆರ್ಥಿಕ ಸಂಕಷ್ಟಕ್ಕೆ ಸೀಲುಕಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಹಂದಿಗಳಿಂದ ರೋಗಗಳು ಬರುತ್ತವೆ. ನಾಗರೀಕರಿಗೆ ತೊಂದರೆ ಆಗುತ್ತದೆ ಎಂದು ಹಂದಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ ಎಂದು ಆಯುಕ್ತರು ಹೇಳುತ್ತಾರೆ. ಈ ಹಂದಿಗಳನ್ನು ಬೇರೆ ಕಡೆಗೆ ಸಾಗಣೆ ಮಾಡಿರುವುದರಿಂದ ಹಂದಿ ಮಾಲಕರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ, ಈ ಹಂದಿಯ ಮಾಲಕರಿಗೆ ಮಹಾನಗರ ಪಾಲಿಕೆಯು ಆರ್ಥಿಕ ಪರಿಹಾರ ನೀಡಬೇಕು. ಹಾಗೂ ಹಂದಿಗಳನ್ನು ಸಾಗಣೆ ಮಾಡಲು ನಗರದ ಹೊರ ವಲಯದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಪೀಠಕ್ಕೆ ಮನವಿ ಮಾಡಿದರು. ಸರಕಾರದ ಪರ ವಾದಿಸಿದ ವಕೀಲರು, ದಾವಣೆಗೆರೆ ನಗರವನ್ನು ಸ್ಮಾರ್ಟ್ ಸೀಟಿಯನ್ನಾಗಿಸಲು ಕೇಂದ್ರ ಸರಕಾರ 1 ಸಾವಿರ ಕೋಟಿ ರೂ.ಬಿಡುಗಡೆ ಮಾಡಿದೆ. ಅಲ್ಲದೆ, ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಸ್ಥಳೀಯರು ಹಂದಿಗಳ ಹಾವಳಿಯಿಂದ ತೊಂದರೆಯಾಗುತ್ತಿದೆ ಎಂದು ಪಾಲಿಕೆಯ ಆಯುಕ್ತರಿಗೆ ಪತ್ರ ಬರೆದಿದ್ದರು. ಹೀಗಾಗಿ, ರಸ್ತೆಗಳಲ್ಲಿ ಓಡಾಡುತ್ತಿದ್ದ ಹಂದಿಗಳನ್ನು ಹಿಡಿದು ಚಿತ್ರದುರ್ಗದ ಬಳಿ ಬಿಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಆದೇಶವನ್ನು ಕಾಯ್ದಿರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News