ಯಾವುದಾದರೂ ಪ್ರಾಣಿಯ ಚಿಹ್ನೆ ಮುಂದಿಟ್ಟು ಚುನಾವಣೆ ಎದುರಿಸಿ: ಜೆಡಿಎಸ್ ವಿರುದ್ಧ ಈಶ್ವರಪ್ಪ ವಾಗ್ದಾಳಿ

Update: 2019-03-12 18:18 GMT

ಮೈಸೂರು,ಮಾ.12: ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ಕ್ಷಮೆ ಕೇಳುವುದಕ್ಕೆ ಬರುವುದಿಲ್ಲವೇ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ಮಾತನಾಡಿದ ಅವರು ಜೆಡಿಎಸ್ ನವರು ತೆನೆ ಹೊತ್ತ ಮಹಿಳೆಯ ಚಿಹ್ನೆ ಹೊಂದಿದ್ದಾರೆ. ಆದರೆ ಅವರು ನೀಡುತ್ತಿರುವ ಹೇಳಿಕೆಗಳು ಮಹಿಳೆಯರಿಗೆ ಗೌರವ ತರುತ್ತಿಲ್ಲ. ಸಹೋದರಿ ಸುಮಲತಾ ಅವರ ಕುರಿತು ತುಚ್ಛವಾಗಿ ಮಾತನಾಡುತ್ತಿದ್ದಾರೆ. ರೇವಣ್ಣ ಇದುವರೆಗೂ ಕ್ಷಮೆ ಕೇಳಿಲ್ಲ. ಅವರ ಬದಲಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್, ಸಿಎಂ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಎಲ್ಲರೂ ಕ್ಷಮೆ ಕೇಳಿದ್ದಾರೆ. ಈ ಕೂಡಲೇ ರೇವಣ್ಣರಿಂದ ಕ್ಷಮೆ ಕೇಳಿಸಿ ಎಂದು ದೇವೆಗೌಡರಲ್ಲಿ ನಾನು ಆಗ್ರಹಿಸುತ್ತೇನೆ. ಇಲ್ಲವಾದರೆ ನಿಮ್ಮ ಪಕ್ಷದ ಚಿಹ್ನೆಯನ್ನು ಬದಲಾಯಿಸಿ, ಯಾವುದಾದರೂ ಪ್ರಾಣಿಯ ಚಿಹ್ನೆ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಯುವಕರು ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಬೇಕೆಂದು ಕಾಯುತ್ತಿದ್ದಾರೆ. 28 ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಬಲಿಷ್ಠವಾಗಿದೆ. ಇದಕ್ಕಾಗಿ  ವಿಧಾನಸಭೆಯಲ್ಲಿ 104 ಸ್ಥಾನ ಪಡೆದಿದ್ದೇವೆ. ಸಂಘಟನೆ ಶಕ್ತಿಯ ಜೊತೆಗೆ 'ಮೋದಿ' ಎಂಬ ಪದ ರೈತರು, ಯುವಕರು, ಹೆಣ್ಣು ಮಕ್ಕಳನ್ನು ಆಕರ್ಷಿಸುತ್ತಿದೆ ಎಂದರು. 20 ರಿಂದ 25 ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಛಲ ನಮ್ಮಲ್ಲಿದೆ. ಇಡೀ ದೇಶ ಒಂದಾದ ಮೇಲೆ ಚಿಲ್ಲರೆ ಪಕ್ಷಗಳು ನಮಗ್ಯಾವ ಲೆಕ್ಕ ಎಂದು ಹೇಳಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ನಂತರ ಕುರ್ಚಿಗಾಗಿ ಸೆಣೆಸಿದ್ದು ಬಿಟ್ಟರೆ ಬೇರೆ ಯಾವ ಸಾಧನೆ ಮಾಡಿಲ್ಲ. ಜನತೆ ಮೈತ್ರಿ ಸರ್ಕಾರದ ಕಳಪೆ ಸಾಧನೆ ನೋಡಿ ರೋಸಿಹೋಗಿದ್ದು, ತಿರಸ್ಕಾರ ಭಾವನೆ ಬೆಳೆಸಿಕೊಂಡಿದ್ದಾರೆ. ಮೋದಿಯವರತ್ತ ಒಲವು ತೋರಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಓರ್ವ ಪೇಪರ್ ಹುಲಿ. ತಮ್ಮನ್ನು ತಾವೇ ಹಿಂದುಳಿದ ವರ್ಗಗಳ ನಾಯಕನೆಂದು ಬಿಂಬಿಸಿಕೊಳ್ಳುತ್ತಾರೆ. ಪೇಪರ್ ಟೈಗರ್ ಎನ್ನುವ ಪದ ಅವರಿಗೆ ಹೇಳಿ ಮಾಡಿಸಿದಂತಿದೆ. ನನಗೆ ಬಿಪಿ ಶುಗರ್ ಇಲ್ಲ. ನನ್ನ ಬಗ್ಗೆ ಮಾತನಾಡುವವರಿಗೆಲ್ಲ ಬಿಪಿ, ಶುಗರ್ ಬರುತ್ತದೆ ಎಂದರು. ಸಿದ್ದರಾಮಯ್ಯನವರು ನನ್ನ ವಿಚಾರಕ್ಕೆ ಪದೇ ಪದೇ ಸಹನೆ ಕಳೆದುಕೊಳ್ಳುತ್ತಾರೆ. ಯಾಕೆ ಅಂತ ಅವರನ್ನೇ ಕೇಳಬೇಕೆಂದು ಟೀಕಿಸಿದರು.

ಈ ಸಂದರ್ಭ ಮಾಜಿ ಸಚಿವ ಅರವಿಂದ್ ಲಿಂಬಾವಳಿ, ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಂದ್ರ, ನಗರಾಧ್ಯಕ್ಷ ಡಾ.ಬಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News