ಸುಮಲತಾರೊಂದಿಗೆ ಬಿಜೆಪಿ ಸಂಪರ್ಕದಲ್ಲಿದೆ: ಕೆ.ಎಸ್ ಈಶ್ವರಪ್ಪ

Update: 2019-03-13 12:24 GMT

ಶಿವಮೊಗ್ಗ, ಮಾ. 13: ಚಿತ್ರನಟ ದಿವಂಗತ ಅಂಬರೀಶ್‍ ರವರ ಪತ್ನಿ ಸುಮಲತಾರೊಂದಿಗೆ ಬಿಜೆಪಿ ಸಂಪರ್ಕದಲ್ಲಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. 

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡೆ ಗಮನಿಸಿ, ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು. 

ಮತ್ತೆ ಪ್ರಧಾನಿ: ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿ ಆಗಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಬಿಜೆಪಿ ವಿರುದ್ದ ಒಂದಾದ ರಾಷ್ಟ್ರೀಯ ಹಾಗೂ ಸ್ಥಳೀಯ ಪಕ್ಷಗಳೆಲ್ಲ ಛಿದ್ರ ಛಿದ್ರವಾಗಲಿವೆ. ಕರ್ನಾಟಕದಲ್ಲೂ ಕೂಡ ಜೆಡಿಎಸ್ ಮತ್ತು ಕಾಂಗ್ರೆಸ್ ಒಟ್ಟಾದರೂ ಬಿಜೆಪಿಯನ್ನು ತಡೆಯಲು ಸಾಧ್ಯವಿಲ್ಲ ಎಂದರು. 

21 ರಿಂದ 25 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಬಿಜೆಪಿಗೆ ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ. ಶಿವಮೊಗ್ಗದಲ್ಲೂ ಬಿಜೆಪಿ ಅಭ್ಯರ್ಥಿ ಜಯ ಖಚಿತವಾಗಿದೆ. ಮತದಾರರು ಮತದಾನ ಮಾಡಲು ಮುಂದೆ ಬರಬೇಕು. ಅತಿ ಹೆಚ್ಚು ಮತದಾನ ಈ ಬಾರಿ ರಾಜ್ಯದಲ್ಲಿ ನಡೆಯಬೇಕು ಎಂದು ಹೇಳಿದರು. 

ಮೋದಿ ಪ್ರಧಾನಿಯಾದ ನಂತರ ಭಾರತದ ಭವಿಷ್ಯವೇ ಬದಲಾಗಿದೆ. ರಕ್ಷಣಾ ಇಲಾಖೆಗಾಗಿಯೇ ಈ ಬಾರಿ 3 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಯೋಧರು ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜಗತ್ತು ಕೂಡ ಭಾರತದ ಜೊತೆಗಿದೆ. ವಿಶ್ವದ ರಾಷ್ಟ್ರಗಳು ಪಾಕಿಸ್ತಾನಕ್ಕೆ ಛೀಮಾರಿ ಹಾಕುತ್ತಿವೆ. ಇದು ಪ್ರಧಾನಿ ಮೋದಿಯವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು. 

ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಎಲ್ಲ ಪಕ್ಷಗಳಲ್ಲಿಯೂ ಕುಟುಂಬ ರಾಜಕಾರಣ ಇದೆ. ಕೇಂದ್ರದಲ್ಲಿ ವಂಶಪಾರಂಪರ್ಯ ರಾಜಕಾರಣವೇ ಇದೆ. ಆದರೆ ದೇವೇಗೌಡರ ಕುಟುಂಬ ಇದಕ್ಕೆ ತದ್ವಿರುದ್ದವಾಗಿದೆ. ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳನ್ನು ಕೂಡ ಚುನಾವಣೆಗೆ ಎಳೆದು ತರುತ್ತಾರೆ. ಇದು ಅತಿಯಾದ ಕುಟುಂಬ ರಾಜಕಾರಣದ ವ್ಯಾಮೋಹ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News