ಹರದೂರು ಕಾಜೂರು ಉರೂಸ್‍ಗೆ ಮಾ.15 ರಂದು ಚಾಲನೆ

Update: 2019-03-13 12:31 GMT

ಮಡಿಕೇರಿ, ಮಾ.13: ಅನೇಕ ವರ್ಷಗಳ ಇತಿಹಾಸವಿರುವ ಹರದೂರು ಕಾಜೂರು ವಾರ್ಷಿಕ ಉರೂಸ್ ಸಮಾರಂಭ ಮಾ.15 ರಿಂದ 18ರ ವರೆಗೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಹರದೂರು ಕಾಜೂರು ಜಮಾಅತ್‍ನ ಪದಾಧಿಕಾರಿ ಎಂ.ಎಂ.ಮುಸ್ತಫಾ ಸಖಾಫಿ ಮಾತನಾಡಿ, ಮಾ.15 ರಿಂದ ನಾಲ್ಕು ದಿನಗಳ ಕಾಲ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಆಧ್ಯಾತ್ಮಿಕ ಕೇಂದ್ರದಲ್ಲಿ ಮಾ.15 ರಂದು ಮಧ್ಯಾಹ್ನ 2 ಗಂಟೆಗೆ ಉರೂಸ್ ಆರಂಭೋತ್ಸವದ ಪ್ರಯುಕ್ತ ಗರಗಂದೂರು ಜಮಾಅತ್ ಅಧ್ಯಕ್ಷ ಕೆ. ಹನೀಫ್ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಮಾ.16 ರಂದು ಸಂಜೆ 7 ಗಂಟೆಗೆ ಗರಗಂದೂರು ಮಸೀದಿಯ ಧರ್ಮಗುರು ಹನೀಫ್ ಸಖಾಫಿ ಅವರಿಂದ ಖತಮುಲ್ ಖುರ್‍ಆನ್ ಕಾರ್ಯಕ್ರಮ ನಡೆಯಲಿದೆ.

ಮಾ.17 ರಂದು ಸಂಜೆ 7 ಗಂಟೆಗೆ ಪಾಲಿಬೆಟ್ಟದ ಸಿದ್ದೀಖ್ ಫಾಳಿಲಿ ಅವರ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಲಿದ್ದು, ರಾತ್ರಿ 8 ಗಂಟೆಗೆ ಸ್ವಲಾತಿನ ಮಹತ್ವದ ಕುರಿತು ಒಟ್ಟಪಡವು ಹಂಝ ಮಿಸ್ಬಾಹಿ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೊಡಗಿನ ನಾಯಿಬ್ ಖಾಝಿಗಳಾದ ಹಾಜಿ ಎಂ.ಎಂ. ಅಬ್ದುಲ್ಲ ಫೈಝಿ, ಹಾಜಿ ಕೆ.ಎ. ಮಹಮೂದ್ ಮುಸ್ಲಿಯಾರ್ ಎಡಪಾಲ ಮತ್ತಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.

ಅಂದು ರಾತ್ರಿ 10 ಗಂಟೆಗೆ ನಾರಿಯತ್ ಸ್ವಲಾತ್ ಹಾಗೂ ದಿಕ್ರ್ ದುಆ ಮಜ್ಲಿಸ್ ನಡೆಯಲಿದ್ದು, ಎಮ್ಮೆಮಾಡಿದ ಸೆಯ್ಯದ್ ಇಲ್ಯಾಸ್ ಕಾಮಿಲ್ ಸಖಾಫಿ ಆಲ್ ಹೈದ್ರೋಸಿ ತಂಙಳ್, ಸೈಯ್ಯದ್ ಹುಸೈನ್ ಅಲ್ ಹೈದ್ರೋಸಿ, ಆದೂರು ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.

ಮಾ.18 ರಂದು ಬೆಳಿಗ್ಗೆ 10 ಗಂಟೆಗೆ ಮೌಲೂದ್ ಪಾರಾಯಣವು ಆದೂರಿನ ಟಿ.ವಿ. ಆಟಕೋಯ ತಂಙಳ್ ಅವರ ನೇತೃತ್ವದಲ್ಲಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ಟರ್, ಎಮ್ಮೆಮಾಡಿನ ಸೆಯ್ಯದ್ ಇಲ್ಯಾಸ್ ತಂಙಳ್, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಎ. ಯಾಕೂಬ್, ಸುಂಟಿಕೊಪ್ಪ ಎ.ಬಿ. ಅಜೀಜ್, ಗರಗಂದೂರಿನ ಕಾಫಿ ಬೆಳೆಗಾರ ಅಪ್ಪಸ್ವಾಮಿ, ಜಿಪಂ ಸದಸ್ಯ ಪಿ.ಎಂ. ಲತೀಫ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಮಧ್ಯಾಹ್ನ 3 ಗಂಟೆಗೆ ಸಾರ್ವಜನಿಕರಿಗೆ ಅನ್ನದಾನ ನಡೆಯಲಿದೆ ಎಂದು ಮುಸ್ತಫಾ ಸಖಾಫಿ ತಿಳಿಸಿದರು. 

ಹರಗಂದೂರು ಜಮಾಅತ್‍ಗೆ ಸೇರಿರುವ ಹರದೂರು ಕಾಜೂರಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಪವಾಡ ಪುರುಷರ ಸನ್ನಿಧಿಯು ನೊಂದವರ ಪಾಲಿನ ಆಶಾ ಕಿರಣವಾಗಿದ್ದು, ಬಡವ ಬಲ್ಲಿದರೆನ್ನದೆ ಎಲ್ಲಾ ವರ್ಗದ ಜನರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳ ಪರಿಹಾರ ಕೇಂದ್ರವಾಗಿ ಮಾರ್ಪಟ್ಟಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಮಾಅತ್‍ನ ಅಧ್ಯಕ್ಷರಾದ ಕೆ. ಹನೀಫಾ, ಕಾರ್ಯದರ್ಶಿ ಎ.ಅಬ್ದುಲ್ ರಹ್ಮಾನ್, ಪದಾಧಿಕಾರಿಗಳಾದ ಸಲೀಂ ಮಾಸ್ಟರ್ ಹಾಗೂ ಕೆ.ಎ.ಹನೀಫ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News