ವರಿಷ್ಠರು ಸೂಚಿಸಿದರೆ ಬೀದರ್ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ: ​ಈಶ್ವರ್ ಖಂಡ್ರೆ

Update: 2019-03-13 12:38 GMT

ಬೆಂಗಳೂರು, ಮಾ. 13: ಪಕ್ಷದ ವರಿಷ್ಠರು ಸೂಚಿಸಿದರೆ ಬೀದರ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಾನು ಸಿದ್ಧ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಬಿ.ಖಂಡ್ರೆ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಮಾ.16ಕ್ಕೆ ದಿಲ್ಲಿಯಲ್ಲಿ ನಡೆಯುವ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಇದೀಗ ತಮಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ವರಿಷ್ಠರಿಂದ ಯಾವುದೇ ಸೂಚನೆ ಬಂದಿಲ್ಲ. ಒಂದು ವೇಳೆ ಪಕ್ಷದ ಹೈಕಮಾಂಡ್ ಸೂಚಿಸಿದರೆ ಸ್ಪರ್ಧಿಸಲು ಸಿದ್ಧ ಎಂದ ಅವರು, ರಾಜ್ಯದಲ್ಲಿನ ಮೈತ್ರಿ ಸರಕಾರಿ ಸುಭದ್ರವಾಗಿದೆ ಎಂದರು.

ಮಂಡ್ಯ ಕ್ಷೇತ್ರದಲ್ಲಿನ ಗೊಂದಲಗಳಿಗೆ ವರಿಷ್ಠರು ಶೀಘ್ರವೇ ಪರಿಹಾರ ಸೂಚಿಸಲಿದ್ದು, ಮಂಡ್ಯ ಕ್ಷೇತ್ರದ ಅಭ್ಯರ್ಥಿ ಸಂಬಂಧ ಯಾರೂ ಕೂಡ ಬಹಿರಂಗ ಹೇಳಿಕೆ ನೀಡಬಾರದು ಎಂದು ಪಕ್ಷದ ವರಿಷ್ಠರು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾ.18ಕ್ಕೆ ಕಲಬುರಗಿಗೆ ಆಗಮಿಸುತ್ತಿದ್ದು, ಅಂದಿನ ಕಾರ್ಯಕ್ರಮಕ್ಕೆ 2ಲಕ್ಷ ಮಂದಿ ಕಾರ್ಯಕರ್ತರನ್ನು ಸೇರಿಸಲಾಗುವುದು ಎಂದ ಈಶ್ವರ್ ಖಂಡ್ರೆ, ಈ ಸಮಾವೇಶಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News