ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರಕಾರ ಪತನ: ಜಗದೀಶ್ ಶೆಟ್ಟರ್

Update: 2019-03-13 14:06 GMT

ಬಳ್ಳಾರಿ, ಮಾ.13: ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಪತನವಾಗುವುದು ನಿಶ್ಚಿತ ಎಂದು ಬಿಜೆಪಿ ಬಳ್ಳಾರಿ ಜಿಲ್ಲಾ ಚುನಾವಣಾ ಉಸ್ತುವಾರಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಬಳಿಕ ಕುಮಾರಸ್ವಾಮಿ ಸ್ವತಃ ತಾವೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಇಲ್ಲದಿದ್ದಲ್ಲಿ, ಕಾಂಗ್ರೆಸ್ ಪಕ್ಷವೇ ಜೆಡಿಎಸ್‌ಗೆ ನೀಡಿರುವ ಬೆಂಬಲವನ್ನು ಹಿಂಪಡೆಯಲಿದೆ ಎಂದರು.

ಸಮ್ಮಿಶ್ರ ಸರಕಾರದ ಮೇಲೆ ರಾಜ್ಯದ ಜನರಿಗೆ ಭರವಸೆಯಿಲ್ಲ. ಇದೊಂದು ಒತ್ತಾಯದ ಮದುವೆ ರೀತಿಯಿದೆ. ದಿನನಿತ್ಯ ಇವರ ಸಂಸಾರ(ಕಾಂಗ್ರೆಸ್-ಜೆಡಿಎಸ್ ನಡುವೆ)ದಲ್ಲಿ ಜಗಳವಾಗುತ್ತಿದೆ. ಪರಸ್ಪರ ಹೊಂದಾಣಿಕೆಯಿಲ್ಲದ ಈ ಸರಕಾರದ ಕಾರ್ಯವೈಖರಿಯನ್ನು ನೋಡಿ ಜನರು ಬೇಸತ್ತಿದ್ದಾರೆ ಎಂದು ಶೆಟ್ಟರ್ ಹೇಳಿದರು.

ಜೆಡಿಎಸ್‌ನವರು ಕಾಂಗ್ರೆಸ್ ಬದಲು, ಬಿಜೆಪಿ ಜೊತೆ ಕೈ ಜೋಡಿಸಿದ್ದರೆ ಇಷ್ಟೊಂದು ಸಮಸ್ಯೆಗಳು ಆಗುತ್ತಿರಲಿಲ್ಲ. ಜೆಡಿಎಸ್‌ನವರು ನಮ್ಮೊಂದಿಗೆ ಅಧಿಕಾರ ನಡೆಸಿದ್ದರೆ, ಸಹಜವಾದ ಮೈತ್ರಿ ಸರಕಾರದ ರೀತಿಯಲ್ಲಿರುತ್ತಿತ್ತು. ಭವಿಷ್ಯದಲ್ಲಿ ಅವರು ನಮ್ಮ ಜೊತೆ ಬರಬಹುದು ಎಂದು ಅವರು ಹೇಳಿದರು.

ನಾನು ಹೆಸರಿಗೆ ಮಾತ್ರ ಬಳ್ಳಾರಿ ಜಿಲ್ಲೆಯ ಚುನಾವಣಾ ಉಸ್ತುವಾರಿಯಾಗಿದ್ದೇನೆ. ಶಾಸಕ ಬಿ.ಶ್ರೀರಾಮುಲು ಅವರೇ ಬಳ್ಳಾರಿ ಕ್ಷೇತ್ರವನ್ನು ನೋಡಿಕೊಳ್ಳುತ್ತಾರೆ. ಇಲ್ಲಿನ ಅಭ್ಯರ್ಥಿ ಆಯ್ಕೆಯಲ್ಲಿ ಶ್ರೀರಾಮುಲು ಅಭಿಪ್ರಾಯವು ಮಹತ್ವದ್ದಾಗಿದೆ. ಕೋರ್ ಕಮಿಟಿಯಲ್ಲಿ ಅವರು ಇರುತ್ತಾರೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

ಬಳ್ಳಾರಿ ಕ್ಷೇತ್ರದಿಂದ ಕಣಕ್ಕಿಳಿಯಲು ಆರೇಳು ಮಂದಿ ಆಕಾಂಕ್ಷಿಗಳಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಪಕ್ಷದ ಪ್ರಮುಖ ನಾಯಕರ ಸಭೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News