ಅಲ್ಪಸಂಖ್ಯಾತರಿಗೆ ಕನಿಷ್ಠ 3 ಕ್ಷೇತ್ರಗಳಲ್ಲಿ ಟಿಕೆಟ್ ನೀಡಿ: ಸಿದ್ದರಾಮಯ್ಯಗೆ ಸಮುದಾಯದ ಮುಖಂಡರ ಒತ್ತಾಯ

Update: 2019-03-14 16:44 GMT

ಬೆಂಗಳೂರು, ಮಾ.14: ಲೋಕಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ ಕನಿಷ್ಠ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಸಮುದಾಯದ ಮುಖಂಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಒತ್ತಾಯ ಮಾಡಿದ್ದಾರೆ.

ಬುಧವಾರ ರಾತ್ರಿ ಶಾಂತಿನಗರ ಕ್ಷೇತ್ರದ ಶಾಸಕ ಹಾಗೂ ಬಿಎಂಟಿಸಿ ಅಧ್ಯಕ್ಷ ಎನ್.ಎ.ಹಾರೀಸ್ ನಿವಾಸದಲ್ಲಿ ಆಯೋಜಿಸಲಾಗಿದ್ದ ಭೋಜನಕೂಟದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಸಮುದಾಯದ ಮುಖಂಡರು ಈ ಬೇಡಿಕೆ ಮುಂದಿಟ್ಟಿದ್ದಾರೆ.

ಬೆಂಗಳೂರು ಕೇಂದ್ರ, ಹಾವೇರಿ ಹಾಗೂ ಬೀದರ್ ಲೋಕಸಭಾ ಕ್ಷೇತ್ರಗಳಿಂದ ಅಲ್ಪಸಂಖ್ಯಾತ ಸಮುದಾಯದವರಿಗೆ ಟಿಕೆಟ್ ನೀಡಬೇಕು. ಕಳೆದ 15 ವರ್ಷಗಳಿಂದ ರಾಜ್ಯದಿಂದ ಅಲ್ಪಸಂಖ್ಯಾತ ಸಮುದಾಯದ ಒಬ್ಬ ಜನಪ್ರತಿನಿಧಿಯೂ ಆಯ್ಕೆಯಾಗಿ ಸಂಸತ್ತು ಪ್ರವೇಶಿಸಿಲ್ಲ. ಈ ಬಾರಿಯಾದರೂ ನಮ್ಮ ಸಮುದಾಯದವರು ಗೆಲ್ಲುವಂತೆ ಕಾಂಗ್ರೆಸ್ ಪಕ್ಷ ಶ್ರಮಿಸಬೇಕು ಎಂದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಗೆಲ್ಲುವ ಕ್ಷೇತ್ರಗಳಲ್ಲಿ ಅವಕಾಶ ಮಾಡಿಕೊಡಿ, ನಾಮಕಾವಸ್ತೆಗೆ ಟಿಕೆಟ್ ನೀಡುವಂತೆ ಮಾಡಿ, ನಮ್ಮ ಸಮುದಾಯದ ಧ್ವನಿಯೇ ಇಲ್ಲದಂತೆ ಮಾಡಬೇಡಿ. ಜೆಡಿಎಸ್ ಪಕ್ಷಕ್ಕೆ ಹಂಚಿಕೆಯಾಗಿರುವ ಎಂಟು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲೂ ಮುಸ್ಲಿಮರಿಗೆ ಅವಕಾಶ ಸಿಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸಮುದಾಯ ಕಾಂಗ್ರೆಸ್ ಪರವಾಗಿ ನಿಂತಿತ್ತು. ಈಗ ಅದಕ್ಕೆ ಪ್ರತಿಫಲ ನೀಡುವ ಅಗತ್ಯವಿದೆ ಎಂದು ಮುಖಂಡರು ಕೋರಿದ್ದಾರೆ ಎನ್ನಲಾಗಿದೆ.

ಸಮುದಾಯದ ಮುಖಂಡರ ಅಭಿಪ್ರಾಯವನ್ನು ಗಂಭೀರವಾಗಿ ಆಲಿಸಿದ ಸಿದ್ದರಾಮಯ್ಯ, ಈ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚಿಸಿ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಭೋಜನಾಕೂಟದಲ್ಲಿ ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್‌ ಖಾನ್, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಝಮೀರ್‌ ಅಹ್ಮದ್‌ ಖಾನ್ ಸೇರಿದಂತೆ ಇನ್ನಿತರ ಪ್ರಮುಖ ನಾಯಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News