ಆಯುಷ್ಮಾನ್ ಭಾರತವು ದೇಶದ ಶ್ರೀಮಂತ ಉದ್ಯಮಿಗಳಿಗೆ ಕೊಡುಗೆಯಾಗಿದೆ: ರಾಹುಲ್

Update: 2019-03-15 14:00 GMT

ರಾಯಪುರ(ಛತ್ತೀಸ್‌ಗಡ),ಮಾ.15: ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಆಯುಷ್ಮಾನ್ ಭಾರತ ಯೋಜನೆಯು ಕೆಲವೇ ಆರೋಗ್ಯ ವಿಷಯಗಳಿಗೆ ಸೀಮಿತಗೊಂಡಿದೆ ಮತ್ತು ಶ್ರೀಮಂತ ಉದ್ಯಮಿಗಳಿಗೆ ಕೊಡುಗೆಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ಇಲ್ಲಿ ಆರೋಪಿಸಿದರು.

ಇಲ್ಲಿ ವೈದ್ಯಕೀಯ ವೃತ್ತಿಪರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು,ಆಯುಷ್ಮಾನ್ ಭಾರತ ಯೋಜನೆಯು ಆಸ್ಪತ್ರೆಗಳು ಮತ್ತು ವೈದ್ಯಕೀಯ ವೃತ್ತಿಪರರ ಸೂಕ್ತ ಬೆಂಬಲವಿಲ್ಲದೆ ವಿಮೆಯನ್ನು ಒದಗಿಸುತ್ತಿದೆ. ಇದೊಂದು ಸೀಮಿತ ಯೋಜನೆಯಾಗಿದ್ದು,ಕೆಲವೇ ಆರೋಗ್ಯ ಸಮಸ್ಯೆಗಳನ್ನು ಗುರಿಯಾಗಿಸಿಕೊಂಡಿದೆ ಮತ್ತು ಭಾರತದ 15-20 ಶ್ರೀಮಂತ ಉದ್ಯಮಿಗಳಿಗೆ ಲಾಭದ ಕೊಡುಗೆಯಾಗಿದೆ. ನಾವು ತರಲಿರುವ ಯೋಜನೆ ಈ ಮಾದರಿಯಲ್ಲಿರುವುದಿಲ್ಲ. ಆರೋಗ್ಯ ರಕ್ಷಣೆ ಮತ್ತು ಶಿಕ್ಞಣ ಕ್ಷೇತ್ರದಲ್ಲಿ ಸಾರ್ವಜನಿಕ ವೆಚ್ಚದ ಅಗತ್ಯವಿದೆ ಎಂದರು.

ಒಂದು ಅರ್ಥದಲ್ಲಿ ಆರೋಗ್ಯ ರಕ್ಷಣೆಯು ಆರೋಗ್ಯವಂತ ಸಮಾಜದ ಬುನಾದಿಯಾಗಿದೆ,ಹೀಗಾಗಿ ಈ ಬುನಾದಿ ಸದೃಢವಾಗಿ ನಿರ್ಮಾಣಗೊಳ್ಳುವಂತೆ ನಾವು ನೋಡಿಕೊಳ್ಳಬೇಕು ಎಂದ ರಾಹುಲ್,ಸಾರ್ವತ್ರಿಕ ಚುನಾವಣೆಗಳ ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣ ಕ್ಷೇತ್ರಕ್ಕಾಗಿ ಹಣದ ಹಂಚಿಕೆಯನ್ನು ಹೆಚ್ಚಿಸಲಾಗುವುದು.ಸೀಮಿತ ಸಂಖ್ಯೆಯ ಜನರು ದುಡ್ಡು ದೋಚಲು ನಾವು ಅವಕಾಶ ನೀಡುವುದಿಲ್ಲ ಎಂದರು.

ಆರೋಗ್ಯ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳು,ದೊಡ್ಡ ಉದ್ಯಮಗಳು,ವಿಮೆ ಕಂಪನಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪಾತ್ರವಿದೆಯಾದರೂ ಅದರ ಬುನಾದಿಯು ಸರಕಾರಿ ಮತ್ತು ಸಾರ್ವಜನಿಕ ವಲಯಗಳಾಗಿರಬೇಕು,ಆರೋಗ್ಯ ಕ್ಷೇತ್ರವು ಸಂಪೂರ್ಣವಾಗಿ ಖಾಸಗೀಕರಣವಾಗಬಾರದು ಎಂದ ರಾಹುಲ್,ಭಾರತವು ಗ್ರಾಮೀಣ ವ್ಯವಸ್ಥೆಯಿಂದ ನಗರ ವ್ಯವಸ್ಥೆಗೆ ಪರಿವರ್ತನೆಗೊಳ್ಳುತ್ತಿದೆ,ಆದರೆ ಇದು ಸುಲಭವಾಗಿಲ್ಲ ಎಂದರು.

ಆರೋಗ್ಯ ಕ್ಷೇತ್ರದಲ್ಲಿ ವೆಚ್ಚವನ್ನು ಜಿಡಿಪಿಯ ಶೇ.3ಕ್ಕೆ ಮತ್ತು ಆರೋಗ್ಯ ರಕ್ಷಣೆ ವೃತ್ತಿಪರರ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಎಲ್ಲ ಭಾರತೀಯರಿಗೆ ನಿರ್ದಿಷ್ಟ ಕನಿಷ್ಠ ಆರೋಗ್ಯ ರಕ್ಷಣೆಯ ಹಕ್ಕನ್ನು ಒದಗಿಸಲು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಆರೋಗ್ಯ ರಕ್ಷಣೆ ಕಾಯ್ದೆಯನ್ನು ಸೇರಿಸಲು ಕಾಂಗ್ರೆಸ್ ಪರಿಶೀಲಿಸುತ್ತಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News