ನ್ಯೂಝಿಲೆಂಡ್ ಮಸೀದಿಯಲ್ಲಿ ಶೂಟೌಟ್: 9 ಭಾರತೀಯರ ಸುಳಿವಿಲ್ಲ

Update: 2019-03-15 17:29 GMT
ಅಹ್ಮದ್ ಇಕ್ಬಾಲ್ ಜಹಾಂಗೀರ್

ಕ್ರೈಸ್ಟ್‌ಚರ್ಚ್, ಮಾ15: ನ್ಯೂಝಿಲ್ಯಾಂಡ್‌ನ ಕ್ರೈಸ್ಟ್‌ಚರ್ಚ್ ನಗರದಲ್ಲಿ ಎರಡು ಮಸೀದಿಗಳಲ್ಲಿ ಶುಕ್ರವಾರ ನಡೆದ ಶೂಟೌಟ್ ಘಟನೆಯಲ್ಲಿ ಹೈದರಾಬಾದ್ ಮೂಲದ ಭಾರತೀಯ ಅಹ್ಮದ್ ಇಕ್ಬಾಲ್ ಜಹಾಂಗೀರ್ ಎಂಬವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಗುಂಡಿನ ದಾಳಿಗೆ ತುತ್ತಾಗಿದ್ದ ಅಹ್ಮದ್ ಇಕ್ಬಾಲ್ ಅವರಿಗೆ ಶಸ್ತ್ರಕ್ರಿಯೆ ಮಾಡಲಾಗಿದ್ದು, ಅವರೀಗ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

ಜಹಾಂಗೀರ್ ಅವರ ಹೆತ್ತವರು ಹೈದರಾಬಾದ್‌ನ ಅಂಬರ್‌ಪೇಟ್‌ನ ನಿವಾಸಿಗಳು. ಜಹಾಂಗೀರ್ 15 ವರ್ಷಗಳ ಹಿಂದೆ ನ್ಯೂಝಿಲ್ಯಾಂಡ್‌ಗೆ ತೆರಳಿದ್ದು, ಕ್ರೈಸ್ಟ್‌ಚರ್ಚ್‌ನಲ್ಲಿ ಅವರು ಹೊಟೇಲೊಂದನ್ನು ನಡೆಸುತ್ತಿದ್ದಾರೆ.

9 ಮಂದಿ ಭಾರತೀಯರ ಸುಳಿವಿಲ್ಲ!

ನ್ಯೂಝಿಲೆಂಡ್‌ನಲ್ಲಿನ ಭಾರತದ ಹೈಕಮಿಶನ್ ಸಂಜಯ್ ಕೊಹ್ಲಿ ಅವರು ಹೇಳಿಕೆಯೊಂದನ್ನು ನೀಡಿ, ಕ್ರೈಸ್ಟ್‌ಚರ್ಚ್‌ನ ಮಸೀದಿಗಳ ಮೇಲೆ ನಡೆದ ದಾಳಿ ಘಟನೆಯ ಬಳಿಕ ಭಾರತೀಯ ಮೂಲದ 9 ಮಂದಿ ಕಾಣೆಯಾಗಿರುವುದಾಗಿ ಬಗ್ಗೆ ವಿವಿಧ ಮೂಲಗಳಿಂದ ಮಾಹಿತಿಗಳು ಲಭ್ಯವಾಗಿರುವುದಾಗಿ ತಿಳಿಸಿದ್ದಾರೆ.

 ‘‘ನಮಗೆ ದೊರೆತಿರುವ ಮಾಹಿತಿಗಳ ಪ್ರಕಾರ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ದಾಳಿಯಲ್ಲಿ ಭಾರತೀಯ ಮೂಲದ ಅಥವಾ ಭಾರತೀಯ ರಾಷ್ಟ್ರೀಯತೆ ಹೊಂದಿರುವ 9 ಮಂದಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅಧಿಕೃತ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ. ಅವರ ಕುಟುಂಬಗಳಿಗಾಗಿ ನಾವು ಪ್ರಾರ್ಥಿಸುತ್ತೇವೆ. ಈ ಕೃತ್ಯವು ಮಾನವತೆಯ ವಿರುದ್ಧದ ಅಪರಾಧವಾಗಿದೆ’’ ಎಂದು ಸಂಜೀವ್ ಕೊಹ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಮಧ್ಯೆ ಎಎಂಐಎಂ ಪಕ್ಷದ ನಾಯಕ ಅಸದುದ್ದೀನ್ ಉವೈಸಿ ಅವರು, ಕ್ರೈಸ್ಟ್‌ಚರ್ಚ್‌ನ ಮಸೀದಿಗಳಲ್ಲಿ ನಡೆದ ದಾಳಿ ಘಟನೆಗಳಲ್ಲಿ ಇಬ್ಬರು ಭಾರತೀಯರು ಮೃತಪಟ್ಟಿದ್ದಾರೆಂದು ಮಾಹಿತಿ ನೀಡಿದ್ದಾರೆ.ಇನ್ನೋರ್ವ ಭಾರತೀಯ ಗಂಭೀರ ಗಾಯಗೊಂಡಿದ್ದು ಆತ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವುದಾಗಿ ತಿಳಿಸಿದ್ದಾರೆ.

ಜನಾಂಗೀಯ ನರಮೇಧದ ಮುನ್ಸೂಚನೆ ನೀಡಿದ್ದ ಹಂತಕರು!

ಗುಂಡಿನ ದಾಳಿ ನಡೆಸುವುದಕ್ಕೆ ಕೆಲವು ತಾಸುಗಳ ಮೊದಲು ಹಂತಕನೊಬ್ಬಾತ ತನ್ನ ಟ್ವಿಟರ್‌ಖಾತೆಯಲ್ಲಿ ಜನಾಂಗೀಯ ದ್ವೇಷದ ಪ್ರಣಾಳಿಕೆಯೊಂದನ್ನು ಪ್ರಸಾರ ಮಾಡಿರುವುದಾಗಿ ತಿಳಿದುಬಂದಿದೆ. ತಾನು ಮುಸ್ಲಿಮರ ಮೇಲೆ ದಾಳಿ ನಡೆಸಲು ಬಯಸಿರುವುದಾಗಿ ಆತ ಅದರಲ್ಲಿ ಹೇಳಿಕೊಂಡಿದ್ದನೆನ್ನಲಾಗಿದೆ.

ದೇಶದಲ್ಲಿ ಹೆಚ್ಚುತ್ತಿರುವ ವಲಸಿಗರ ಆಗಮನ ಹಾಗೂ ಅಲ್ಪಸಂಖ್ಯಾತ ಜನಸಂಖ್ಯೆಯ ಹೆಚ್ಚಳದ ಮೂಲಕ ಬಿಳಿಯ ಜನಾಂಗೀಯರ ನಿರ್ಮೂಲನೆಯಾಗುತ್ತಿರುವುದಕ್ಕೆ ಪ್ರತೀಕಾರವಾಗಿ ಈ ಕೃತ್ಯವೆಸಗುವುದಾಗಿ ಆತ ಹೇಳಿದ್ದನೆನ್ನಲಾಗಿದೆ.

ಬುಧವಾರ @ ಬ್ರೆಂಟನ್‌ಹಾರ್ಟ್ ಎಂಬ ಟ್ವಿಟರ್ ಹ್ಯಾಂಡಲ್‌ನಲ್ಲಿ ಬುಧವಾರ ಬಿಳಿಯ ಜನಾಂಗೀಯ ರಾಷ್ಟ್ರವಾದಕ್ಕೆ ಸಂಬಂಧಿಸಿದ ಪ್ರಚೋದನಕಾರಿ ಬರಹಗಳು ಪ್ರಕಟವಾಗಿದ್ದು, ಅದರಲ್ಲಿ ರೈಫಲ್ ಹಾಗೂ ಸೇನಾ ಉಡುಪುಗಳ ಚಿತ್ರಗಳನ್ನು ಪ್ರಕಟಿಸಲಾಗಿತ್ತು. ಶುಕ್ರವಾರ ನಡೆದ ಮಸೀದಿ ದಾಳಿಯಲ್ಲೂ ಅಂತಹದೇ ಶಸ್ತ್ರಾಸ್ತ್ರಗಳನ್ನು ಬಳಸಿರುವುದು, ಲೈವ್‌ಸ್ಟ್ರೀಮ್ ಮೂಲಕ ಪ್ರಸಾರವಾದ ವಿಡಿಯೋದಲ್ಲಿ ಕಂಡುಬಂದಿದೆ.ನ್ಯೂಜಿಲೆಂಡ್‌ನಲ್ಲಿ ಮುಸ್ಲಿಮರು ಒಟ್ಟು ಜನಸಂಖ್ಯೆಯ ಶೇ.1ರಷ್ಟಿದ್ದಾರೆ.

ನ್ಯೂಝಿಲೆಂಡ್ ಪ್ರಧಾನಿ ಜೆಸಿಂಡಾ ಅರ್ಡರ್ನ್ ಖಂಡನೆ

ಕ್ರೈಸ್ಟ್‌ಚರ್ಚ್ ನಗರದ ಎರಡು ಮಸೀದಿಗಳ ಮೇಲೆ ನಡೆದ ದಾಳಿನಡೆದ ದಿನವಾದ ಇಂದು, ನ್ಯೂಝಿಲ್ಯಾಂಡ್‌ನ ಕರಾಳ ದಿನಗಳಲ್ಲೊಂದಾಗಿದೆ. ಇಂದು ನಡೆದ ಶೂಟೌಟ್‌ಗೆ ತುತ್ತಾದವರು ಅತ್ಯಧಿಕ ಮಂದಿ ನ್ಯೂಝಿಲೆಂಡ್‌ಗೆ ವಲಸೆ ಬಂದವರಾಗಿದ್ದಾರೆ. ಅವರು ವಲಸಿಗರಾಗಿರಬಹುದು. ಆದರೆ ಅವರು ನ್ಯೂಜಿಲೆಂಡನ್ನು ತಮ್ಮ ಮನೆಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದು ಅವರ ಮನೆಯಾಗಿದೆ. ಅವರು ನಮ್ಮವರು. ನಮ್ಮ ವಿರುದ್ಧ ಈ ಹಿಂಸಾಚಾರವನ್ನು ಎಸಗಿದವರಿಗೆ ನ್ಯೂಝಿಲೆಂಡ್‌ನಲ್ಲಿ ಸ್ಥಾನವೇ ಇಲ್ಲ ’ಇಂತಹ ಹಿಂಸಾತ್ಮಕ ಕೃತ್ಯಗಳಿಗೆ ನ್ಯೂಜಿಲೆಂಡ್‌ನಲ್ಲಿ ಯಾವುದೇ ಸ್ಥಾನವಿಲ್ಲ ಎಂದು ನ್ಯೂಝಿಲೆಂಡ್ ಪ್ರಧಾನಿ ಜೆಸಿಂಡಾ ಅರ್ಡರ್ನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News