ನ್ಯೂಝಿಲ್ಯಾಂಡ್: ಭೀಕರ ಹತ್ಯಾಕಾಂಡ

Update: 2019-03-15 18:13 GMT

ನ್ಯೂಝಿಲ್ಯಾಂಡ್‌ನ ಕ್ರೈಸ್ಟ್ ಚರ್ಚ್ ನಗರದ ಎರಡು ಮಸೀದಿಗಳಲ್ಲಿ ಶುಕ್ರವಾರ ಬಂದೂಕುಧಾರಿಗಳು ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ ಕನಿಷ್ಠ 49 ಮಂದಿ ಮೃತಪಟ್ಟಿದ್ದಾರೆ ಹಾಗೂ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕ್ರೈಸ್ಟ್ ಚರ್ಚ್ ನಗರದ ಅಲ್ ನೂರ್ ಮಸೀದಿ ಹಾಗೂ ಲಿನ್‌ವುಡ್ ಉಪನಗರದ ಮಸೀದಿಯಲ್ಲಿ ಶೂಟೌಟ್ ನಡೆದಿದೆ. ಇದೊಂದು ಪೂರ್ವಯೋಜಿತ ಭಯೋತ್ಪಾದಕ ಕೃತ್ಯವಾಗಿದೆಯೆಂದು ಪ್ರಧಾನಿ ಜೆಸಿಂಡಾ ಅರ್ಡೆರ್ನ್ ತಿಳಿಸಿದ್ದಾರೆ. ನ್ಯೂಝಿಲ್ಯಾಂಡ್‌ನ ಇತಿಹಾಸದಲ್ಲೇ ಇದೊಂದು ಕರಾಳ ದಿನವಾಗಿ ಪರಿಣಮಿಸಿದೆಯೆಂದವರು ಖಂಡಿಸಿದ್ದಾರೆ. ಶುಕ್ರವಾರದ ಪ್ರಾರ್ಥನೆಗಾಗಿ ಮುಸ್ಲಿಮರು ಈ ಮಸೀದಿಗಳಿಗೆ ಆಗಮಿಸಿದ್ದ ಸಂದರ್ಭದಲ್ಲೇ ಗುಂಡಿನ ದಾಳಿ ನಡೆದಿದೆ. ಈ ಹತ್ಯಾಕಾಂಡದಲ್ಲಿ ಕನಿಷ್ಠ 49 ಮಂದಿ ಮೃತಪಟ್ಟಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಹಲವರ ಪರಿಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನೂ ಏರುವ ಸಾಧ್ಯತೆಯಿದೆಯೆಂದು ನ್ಯೂಝಿಲೆಂಡ್ ಪೊಲೀಸ್ ಆಯುಕ್ತ ಮೈಕ್ ಬುಷ್ ತಿಳಿಸಿದ್ದಾರೆ. ಎರಡು ಮಸೀದಿಗಳಲ್ಲಿ ನಡೆದ ಶೂಟೌಟ್‌ಗಳಲ್ಲಿ ಎಷ್ಟು ಮಂದಿ ಹಂತಕರು ಶಾಮೀಲಾಗಿದ್ದರೆಂಬ ಬಗ್ಗೆ ಪೊಲೀಸರು ಸ್ಪಷ್ಟಪಡಿಸಿಲ್ಲ. ಆದರೆ ಈವರೆಗೆ ಓರ್ವ ಮಹಿಳೆ ಸೇರಿದಂತೆ ನಾಲ್ವರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ನ್ಯೂಝಿ ಲ್ಯಾಂಡ್ ಪ್ರಧಾನಿ ಅರ್ಡೆರ್ನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor