ಶಾಸಕ ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಭಾಷಣ ಆರೋಪ: ನಾಗರಿಕ ಹೋರಾಟ ಸಮಿತಿಯಿಂದ ಧರಣಿ

Update: 2019-03-18 12:28 GMT

ಮೂಡಿಗೆರೆ, ಮಾ.18: ಇತ್ತೀಚೆಗೆ ಸಿಪಿಐ ಮುಖಂಡರು ನಡೆಸಿದ ಪ್ರತಿಭಟನೆಯಲ್ಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ ಮುಖಂಡರು ಪಟ್ಟಣದ ಲಯನ್ಸ್ ವೃತ್ತದಲ್ಲಿ ಸೋಮವಾರ ಧರಣಿ ನಡೆಸಿದರು.

ಈ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ದೇಶದ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರು ದುರುಪಯೋಗ ಪಡಿಸಿಕೊಂಡು ಸಿಪಿಐ ಮುಖಂಡರು ದಲಿತ ಶಾಸಕರ ತೇಜೋವಧೆ ಮಾಡಿರುವುದು ಖಂಡನೀಯ. ಶಾಸಕ ಎಂ.ಪಿ.ಕುಮಾರಸ್ವಾಮಿ ಜಮೀನಿಗೆ ಅವರ ಸಂಗಡಿಗರು ತೆರಳಿದರೆ ಅವರ ವಿರುದ್ಧ ಅಟ್ರಾಸಿಟಿ ಮತ್ತು ಅತಿಕ್ರಮಣ ಪ್ರವೇಶ ಕೇಸನ್ನು ದಾಖಲಿಸಲಾಗಿದೆ. ನಿಜವಾಗಿ ತುಳಿತಕ್ಕೊಳಗಾದವರ ಸಹಾಯಕ್ಕೆ ಬರಬೇಕಾದ ಕಾನೂನನ್ನು ಸಿಪಿಐ ಮುಖಂಡರು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಸರಿಯಲ್ಲ. ಪೊಲೀಸ್ ಇಲಾಖೆ ಕೂಲಂಕಶವಾಗಿ ತನಿಖೆ ಮಾಡಿ ಕೇಸು ದಾಖಕಲಿಸಬೇಕು. ಕುಮಾರಸ್ವಾಮಿ ವಿರುದ್ಧ ಬಳಸಿರುವ ಅವಹೇಳನಕಾರಿ ಭಾಷೆಗಳು ಪೊಲೀಸ್ ಇಲಾಖೆ ಸಿಪಿಐ ಮುಖಂಡರ ಮೇಲೆ ಪ್ರಕರಣ ದಾಖಲಿಸಲು ಸಾಕಾಗಲಿಲ್ಲವೇ? ಕಾನೂನು ರೀತಿಯಲ್ಲಿ ಕೂಡಲೇ ಪ್ರಕರಣ ದಾಖಲಿಸಿ, ಇಲ್ಲವಾದರೆ ಕೇಸು ದಾಖಲಾಗುವವರೆಗೆ ಪೊಲೀಸ್ ಠಾಣೆ ಮುಂದೆ ಧರಣಿ ಕೂರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ, ಪ್ರತಿಭಟನೆ ಮಾಡುವುದು ತಪ್ಪಲ್ಲ. ಆದರೆ ಪ್ರತಿಭಟನೆ ಹೆಸರಿನಲ್ಲಿ ಶಾಸಕರ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿರುವುದು ಸರಿಯಲ್ಲ. ಅಂತಹ ಮಾತುಗಳನ್ನಾಡಲು ನಮಗೂ ಬರುತ್ತದೆ. ಆದರೆ ಅಂತಹ ಸಂಸ್ಕೃತಿ ನಾವು ಕಲಿತಿಲ್ಲ. ಶಾಸಕರ ಹೆಸರು ಹಾಳು ಮಾಡಿ, ಅವರ ವಿರುದ್ಧ ಗೂಬೆ ಕೂರಿಸಲು ಸಾಧ್ಯವಿಲ್ಲ. ಶಾಸಕರ ಜೊತೆ ಹೋಗಿದ್ದ 14 ಮಂದಿಯ ಮೇಲೆ ಅಟ್ರಾಸಿಟಿ ಕೇಸು ದಾಖಲಿಸಿ ಕಾನೂನನ್ನು ದುರುಪಯೋಗ ಪಡಿಸಿಕೊಂಡಿರುವುದು ಸರಿಯಲ್ಲ. ಇದು ಶಾಸಕರನ್ನು ವೀಕ್ ಮಾಡುವ ತಂತ್ರವಾಗಿದೆ ಎಂದು ಹೇಳಿದರು. 

ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ದಲಿತರು ಜಮೀನನ್ನು ಹೊಂದಬಾರದೆಂಬ ದೃಷ್ಟಿಯಿಂದ ಸಿಪಿಐ ಮುಂಖಡರು ಬಣ್ಣ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಸಿಪಿಐ ಮುಖಂಡರೊಬ್ಬರು ಮೇಕನಗದ್ದೆಯಲ್ಲಿ ನನ್ನ ಅಜ್ಜನ ಪಿತ್ರಾರ್ಜಿತ 2 ಎಕರೆ ಭೂಮಿಯನ್ನು ತನ್ನ ತೋಟದಲ್ಲಿ ಸೇರಿಸಿಕೊಂಡಿದ್ದಾರೆ. ಇದೂವರೆಗೂ ಅದನ್ನು ಬಿಟ್ಟುಕೊಟ್ಟಿಲ್ಲ. ಮತ್ತೊಬ್ಬ ಮುಖಂಡ ಹಂಡುಗುಳಿ ಮಂಜಯ್ಯ ಎಂಬ ದಲಿತ ವ್ಯಕ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ 4 ಕೋಟಿ ಬೆಲೆ ಬಾಳುವ  2 ಎಕರೆ ಜಾಗವನ್ನು ಕೇವಲ 4 ಲಕ್ಷ ರೂ. ಗೆ ಹೆಬ್ಬೆಟ್ಟು ಒತ್ತಿಸಿಕೊಂಡು ಕೊಂಡುಕೊಂಡಿದ್ದಾರೆ. ಸಿಪಿಐ ಮುಖಂಡರು ಬಡವರಿಗೆ ಸೂರು ನೀಡುತ್ತೇವೆಂದು ಸುಳ್ಳು ಹೇಳಿ ಮಾನ ಹಾನಿಕರ ಪ್ರತಿಭಟನೆಗೆ ಇಳಿದಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.

ಬೆಳೆಗಾರ ಸಂಘದ ಅಧ್ಯಕ್ಷ ಭಾಲಕೃಷ್ಣ ಮಾತನಾಡಿ, ತಾಲೂಕಿನಲ್ಲಿ ತಮ್ಮ ಜೀವನೋಪಾಯಕ್ಕೆ ಬಹುತೇಕ ರೈತರು ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಹಕ್ಕು ಪತ್ರ ಪಡೆಯಲು ನ್ಯಾಯಯುತವಾಗಿ ಅರ್ಜಿ ಸಲ್ಲಿಸಿಬೇಕಷ್ಟೆ. ಇಲ್ಲವೇ ನ್ಯಾಯಾಲಯದ ಮೊರೆ ಹೋಗಿ ನ್ಯಾಯ ಕೇಳಬೇಕೆ ಹೊರತು, ಪ್ರತಿಭಟನೆ ಮಾಡಿ ಶಾಸಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದು ಶೋಭೆ ತರುವುದಿಲ್ಲವೆಂದು ಹೇಳಿದರು.

ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಚಂದ್ರೇಶ್, ತಾ.ಪಂ. ಅಧ್ಯಕ್ಷ ಕೆ.ಸಿ.ರತನ್, ಜೇನು ಸಹಕಾರ ಸಂಘದ ಅಧ್ಯಕ್ಷ ದುಂಡುಗ ಪ್ರಮೋದ್, ದಲಿತ ಸಂಘದ ಮುಖಂಡ ಲೋಕೇಶ್ ಮಾತನಾಡಿದರು. ಜಿ.ಪಂ. ಸದಸ್ಯರಾದ ಶಾಮಣ್ಣ, ಸುಧಾ ಯೋಗೇಶ್, ಅಮಿತಾ ಮುತ್ತಪ್ಪ, ತಾ.ಪಂ. ಉಪಾಧ್ಯಕ್ಷೆ ಸವಿತಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್ ಕುಮಾರ್, ಸದಸ್ಯರಾದ ವೀಣಾ ಉಮೇಶ್, ಭಾರತೀ ರವೀಂದ್ರ, ಪ್ರಮಿಳಾ, ದೇವರಾಜು, ಪ.ಪಂ. ಸದಸ್ಯೆ ಲತಾ ಲಕ್ಷ್ಮಣ್, ರೈತ ಸಂಘದ ಮುಖಂಡ ದಿವಾಕರ್, ಮುಖಂಡರಾದ ವಿ.ಕೆ.ಶಿವೇಗೌಡ, ಅರೆಕುಡಿಗೆ ಶಿವಣ್ಣ, ಬಾಳೂರು ಭರತ್, ಜಯಂತ್, ಕಲ್ಲೇಶ್, ಸುದರ್ಶನ್, ಸರೋಜಾ ಸುರೇಂದ್ರ, ಪಂಚಾಕ್ಷರಿ, ಜೆ.ಎಸ್.ರಘು, ವಿನೋದ್ ಕಣಚೂರು ಮತ್ತಿತರರು ಉಪಸ್ಥಿತರಿದ್ದರು. 

ಇಡೀ ರಾಜ್ಯದಲ್ಲಿ 1 ಮಾರುತಿ800 ಕಾರು, 7 ಎಕರೆ ತೋಟವನ್ನು ಹೊಂದಿರುವ ಶಾಸಕರಿದ್ದರೆ ಅದು ನಾನೆ. ಸಮಾಜದಲ್ಲಿ ಸಾಕಷ್ಟು ಸಹಾಯ ಮಾಡಬೇಕೆಂಬುವುದೇ ನನ್ನ ಗುರಿಯಾಗಿದೆ. ತನ್ನ ಮೇಲೆ ವೈಯಕ್ತಿಕ ನಿಂದನೆ, ಹಲ್ಲೆಯಂತಹ ದೌರ್ಜನ್ಯಕ್ಕಿಳಿದಿರುವು ನನಗೆ ನೋವು ತಂದಿದೆ. ನಾನೂ ಅಟ್ರಾಸಿಟಿ ಕೇಸು ಹಾಕಿಸಬಹುದು. ಆದರೆ ಜೀವನದಲ್ಲಿ ಅಟ್ರಾಸಿಟಿ ಬಳಸಿದ್ದಾರೆಂಬ ಅಪವಾದ ಇರಬಾರದೆಂದು ಸುಮ್ಮನಿದ್ದೇನೆ. ಸುಳ್ಳು ಅಟ್ರಾಸಿಟಿ ಸಮಾಜವನ್ನು ಒಡೆಯುತ್ತದೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು. 

ಮನೋಹರ್ ಪಾರಿಕ್ಕರ್ ಅವರು ದೇಶವು ಇತಿಹಾಸದಲ್ಲಿ ನೆನಪಿಡುವಂತಹ ವ್ಯಕ್ತಿತ್ವ ಹೊಂದಿದವರು. ದೇಶ ಸೇವೆಗಾಗಿಯೇ ತನ್ನ ಜೀವನವನ್ನೇ ಮುಡಿಪಾಗಿಟ್ಟರು. ಸರ್ಜಿಕಲ್ ಸ್ಟ್ರೈಕ್‍ನ ರೂವಾರಿಯಾಗಿದ್ದ ಇವರು ಇಂದು ದೇಶದಲ್ಲಿ ರಾಫೆಲ್ ಯುದ್ಧ ವಿಮಾನಗಳು ಹಾರಾಡಲು ಪ್ರಮುಖ ಕಾರಣಕರ್ತರು. ದೇಶ ಕಾಯುವ ಸೈನಿಕರ ಸಂಸಾರ ಕಾಯಲು ಒನ್ ರ‍್ಯಾಂಕ್, ಒನ್ ಫೆನ್ಷನ್ ಯೋಜನೆ ಜಾರಿಗೆ ತಂದಂತವರು. ಗೋವಾ ರಾಜ್ಯದ ಮುಖ್ಯಮಂತ್ರಿಯಾಗಿ, ದೇಶದ ರಕ್ಷಣ ಮಂತ್ರಿಯಾಗಿ ಇವರು ಮಾಡಿದ ಸೇವೆ ಸದಾ ಸ್ಮರಣೀಯ 
- ಶೋಭಾ ಕರಂದ್ಲಾಜೆ, ಸಂಸದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News