"ನೀವೂ ಬೇಡ, ನಿಮ್ಮ ಹಣವೂ ಬೇಡ, ನನಗೆ ಸಾಯಲು ಅವಕಾಶ ನೀಡಿ"

Update: 2019-03-19 03:45 GMT

ಲಕ್ನೋ, ಮಾ.19: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸ್ವೀಕರಿಸಿದ ಎರಡು ಸಾವಿರ ರೂಪಾಯಿಗಳನ್ನು ಸಾಲದಿಂದ ಬಳಲುತ್ತಿರುವ ರೈತನೊಬ್ಬ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ವಾಪಸ್ ಕಳುಹಿಸಿದ ಅಪರೂಪದ ಘಟನೆ ವರದಿಯಾಗಿದೆ. ಜತೆಗೆ ದಯಾಮರಣಕ್ಕೆ ಅವಕಾಶ ನೀಡುವಂತೆ ಆಗ್ರಹಿಸುವ ಪತ್ರವನ್ನೂ ಈ ಆಲೂಗಡ್ಡೆ ಬೆಳೆಗಾರ ಮುಖ್ಯಮಂತ್ರಿಗೆ ಬರೆದಿದ್ದಾರೆ.

"ಸರ್ಕಾರದಿಂದ ಬಂದ 2000 ರೂಪಾಯಿಗಳನ್ನು ಆದಿತ್ಯನಾಥ್‌ಗೆ ವಾಪಸ್ ಕಳುಹಿಸಿದ್ದೇನೆ. ಮುಖ್ಯಮಂತ್ರಿಗಳು ನನಗೆ ನೆರವಾಗಲು ಸಾಧ್ಯವಾಗದಿದ್ದರೆ, ನನಗೆ ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶವನ್ನಾದರೂ ನೀಡಲಿ" ಎಂದು 35 ಲಕ್ಷ ರೂ. ಸಾಲದ ಹೊರೆ ಇರುವ 39 ವರ್ಷದ ಪ್ರದೀಪ್ ಶರ್ಮಾ "ಟೈಮ್ಸ್ ಆಫ್ ಇಂಡಿಯಾ" ಜತೆ ಮಾತನಾಡುತ್ತಾ ತಿಳಿಸಿದ್ದಾರೆ.

ಬಾಡಿಗೆ ಮನೆಯಲ್ಲಿ ವಾಸವಿರುವ ಶರ್ಮಾ, 2016ರಲ್ಲಿ ಆಗಿರುವ ಬೆಳೆಹಾನಿಗೆ ಪರಿಹಾರ ಒದಗಿಸುವಂತೆ ಕೋರಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರೂ ಯಾವ ಸ್ಪಂದನೆಯೂ ಸಿಕ್ಕಿಲ್ಲ. "ಕಳೆದ ಡಿಸೆಂಬರ್‌ನಲ್ಲಿ ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ್ದೆ. ಆದರೆ ಬರಿಗೈಯಲ್ಲಿ ವಾಪಸ್ಸಾಗಬೇಕಾಯಿತು" ಎಂದು ಹೇಳಿದರು.

ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಳೆದ ರೈತರೊಬ್ಬರು 750 ಕೆ.ಜಿ. ಈರುಳ್ಳಿ ಮಾರಾಟ ಮಾಡಿ ಬಂದ 1,064 ರೂಪಾಯಿಗಳನ್ನು ಪ್ರತಿಭಟನಾರ್ಥವಾಗಿ ಪ್ರಧಾನಿ ಮೋದಿಗೆ ಕಳುಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News