ಅನಿಲ್ ಅಂಬಾನಿಯನ್ನು ಜೈಲುಶಿಕ್ಷೆಯಿಂದ ಪಾರುಮಾಡಿದ್ದು ಮುಖೇಶ್ ಅಂಬಾನಿ

Update: 2019-03-19 08:18 GMT

ಹೊಸದಿಲ್ಲಿ, ಮಾ.19: ಟೆಲಿಕಾಂ ಕಂಪೆನಿ ಎರಿಕ್ಸನ್‌ ನೊಂದಿಗಿನ ವ್ಯವಹಾರಕ್ಕೆ ಸಂಬಂಧಿಸಿ 450 ಕೋಟಿ ರೂ. ಪಾವತಿಸುವಂತೆ ಅನಿಲ್ ಅಂಬಾನಿಗೆ ಸುಪ್ರೀಂಕೋರ್ಟ್ ಆದೇಶಿಸಿದ್ದು, ಅನಿಲ್ ಅದನ್ನು ಪಾವತಿಸಿದ್ದು ನಿಮಗೆ ಗೊತ್ತಿರಬಹುದು. ಆದರೆ ಆ 450 ಕೋಟಿ ರೂ. ಅನಿಲ್ ಅಂಬಾನಿಗೆ ನೀಡಿದ್ದು ಮಾತ್ರ ಸಹೋದರ ಮುಖೇಶ್ ಅಂಬಾನಿ. ಆ ಮೂಲಕ ಸಹೋದರ ಅನಿಲ್ ಅಂಬಾನಿ ಜೈಲು ಪಾಲಾಗುವುದನ್ನು ಮುಖೇಶ್ ಅಂಬಾನಿ ತಡೆದಿದ್ದಾರೆ.

ಹಣ ಪಾವತಿಗೆ ಕೋರ್ಟ್ ನೀಡಿದ್ದ ಅವಧಿಗೆ ಒಂದು ದಿನ ಬಾಕಿಯಿರುವಾಗಲೇ ಅನಿಲ್ ಅಂಬಾನಿಯ ರಿಲಯನ್ಸ್ ಕಮ್ಯುನಿಕೇಶನ್ ಹಣ ಪಾವತಿಸಿದೆ. ಹಣ ಪಾವತಿಸದಿದ್ದರೆ ಅನಿಲ್ ಅಂಬಾನಿ ಹಾಗೂ ಸಹ ಆರೋಪಿಗಳು ಮೂರು ತಿಂಗಳು ಜೈಲುವಾಸ ಅನುಭವಿಸುವಂತೆ ಫೆಬ್ರವರಿ 20ರಂದು ಕೋರ್ಟ್ ತೀರ್ಪು ನೀಡಿತ್ತು.

ಹಣ ಪಾವತಿಸಿದ ಬಗ್ಗೆ ರಿಲಯನ್ಸ್ ಕಮ್ಯುನಿಕೇಶನ್ ವ್ಯಕ್ತಪಡಿಸಿದ ಬೆನ್ನಲ್ಲೇ ಸಹೋದರ ಮುಖೇಶ್ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿಗೆ ಅನಿಲ್ ಅಂಬಾನಿ ಕೃತಜ್ಞತೆ ಸಲ್ಲಿಸಿದ್ದಾರೆ. ‘ಸಂದಿಗ್ಧ ಘಟ್ಟದಲ್ಲಿ ಬೆಂಬಲಕ್ಕೆ ನಿಂತ ಕಾರಣಕ್ಕೆ ತಾನು ಹಾಗೂ ತನ್ನ ಕುಟುಂಬ ಹೃದಯ ತುಂಬಿದ ಕೃತಜ್ಞತೆಗಳನ್ನು ಅರ್ಪಿಸುವುದಾಗಿ’ ಅವರು ಹೇಳಿದ್ದಾರೆ.

ಸಹೋದರರ ಮನಸ್ತಾಪ

ಉಯಿಲು ಪತ್ರ ಬರೆದಿಡದೆ ತಂದೆ ಧೀರುಭಾಯಿ ಅಂಬಾನಿ 2002ರಲ್ಲಿ ನಿಧನಹೊಂದಿದಾಗ ಸಹೋದರರ ನಡುವೆ ಮನಸ್ತಾಪಗಳು ಉಂಟಾಗುತ್ತವೆ. ಇದು ಮುಂದುವರಿದು ರಿಲಯನ್ಸ್ ಸಂಸ್ಥೆ ಎರಡು ಪಾಲಾಗುವಲ್ಲಿ ಕೊನೆಗೊಳ್ಳುತ್ತದೆ. ಶಕ್ತಿ, ಟೆಲಿಕಾಂ ಕ್ಷೇತ್ರಗಳು ಅನಿಲ್ ಹಾಗೂ ಪಾರಂಪರಿಕ ಉದ್ಯಮಗಳಾದ ಆಯಿಲ್, ಪೆಟ್ರೋ ಕೆಮಿಕಲ್ ಮತ್ತಿತರ ಕ್ಷೇತ್ರಗಳು ಮುಖೇಶ್ ಪಾಲಾಗುತ್ತವೆ. ಆದರೆ ಸಮಸ್ಯೆಗಳು ಇಲ್ಲಿಯೂ ಕೊನೆಗೊಳ್ಳಲಿಲ್ಲ.

ತನ್ನ ವಿರುದ್ಧ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ವಿಮರ್ಶೆಗಳ ಬಗ್ಗೆ ಅನಿಲ್ ಅಂಬಾನಿ ಮುಖೇಶ್ ಅಂಬಾನಿ ವಿರುದ್ಧ 10,000 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದರು. ಬಳಿಕ 2010ರಲ್ಲಿ ತಾಯಿ ಕೋಕಿಲಾ ಬೆನ್ ಸಹೋದರರಿಬ್ಬರ ನಡುವೆ ಸಂಧಾನ ನಡೆಸುವಲ್ಲಿ ಯಶಸ್ವಿಯಾಗುತ್ತಾರೆ.

2017 ಡಿಸೆಂಬರ್ 28ಕ್ಕೆ (ಧೀರುಭಾಯಿ ಅಂಬಾನಿಯ 85ನೆ ಜನ್ಮ ದಿನಾಚರಣೆ ವೇಳೆ) ಅನಿಲ್ ಅಂಬಾನಿಯ ಸಾಲದಿಂದ ಮುಳುಗಿ ಹೋದ ಆರ್ ಕಾಂ ಅನ್ನು ಮುಖೇಶ್ ಅಂಬಾನಿಯ ಜಿಯೋ 23,000 ಕೋಟಿ ರೂ.ಗಳಿಗೆ ಖರೀದಿಸುವುದಾಗಿ ತೀರ್ಮಾನಿಸಲಾಗಿತ್ತು. ಆದರೆ ಆರ್ ಕಾಂ ಹಾಗೂ ಎರಿಕ್ಸನ್ ನಡುವೆ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದ್ದುದರಿಂದ ಈ ವ್ಯವಹಾರಕ್ಕೆ ತಡೆಯುಂಟಾಯಿತು. ಇತ್ತೀಚೆಗೆ ಮುಖೇಶ್ ಅಂಬಾನಿಯ ಮಕ್ಕಳಾದ ಇಷಾ ಹಾಗೂ ಆಕಾಶ್ ಮದುವೆ ಕಾರ್ಯಕ್ರಮದಲ್ಲಿ ಅನಿಲ್ ಹಾಗೂ ಪತ್ನಿ ಟೀನ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News