ಮಡಿಕೇರಿ: ಸರಕಾರಿ ಆಸ್ಪತ್ರೆಗೆ ಖಾಯಂ ವೈದ್ಯರ ನೇಮಕಕ್ಕೆ ಒತ್ತಾಯಿಸಿ ಹೆದ್ದಾರಿ ತಡೆದು ಧರಣಿ

Update: 2019-03-20 12:26 GMT

ಮಡಿಕೇರಿ, ಮಾ.20: ಕೊಡಗಿನ ಗಡಿಭಾಗವಾದ ಕುಟ್ಟ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿ ಸಾರ್ವಜನಿಕರು ಅಂತರರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. 

ಕುಟ್ಟದ ನಿವಾಸಿ, ಟ್ಯಾಕ್ಸಿ ಚಾಲಕ ಮಣಿ (48) ಎಂಬವರು ಬುಧವಾರ ಮುಂಜಾನೆ ಹೃದಯಾಘಾತಕ್ಕೆ ಒಳಗಾಗಿ ತಾವೇ ವಾಹನ ಚಾಲಿಸಿಕೊಂಡು ಕುಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದಾರೆ. ಆದರೆ ಅಲ್ಲಿ ವೈದ್ಯರಾಗಲಿ, ಶುಶ್ರೂಷಕಿಯರಾಗಲಿ ಇಲ್ಲದೆ ಅವರಿಗೆ ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗಲಿಲ್ಲ. ಸ್ಥಳದಲ್ಲಿದ್ದ ಯುವಕರು ಅವರನ್ನು ಉಪಚರಿಸಿ ಖಾಸಗಿ ವೈದ್ಯರ ಬಳಿಗೆ ಕರೆದೊಯ್ದರಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ಕಳೆದ ವಾರವೂ ವೈದ್ಯರ ಅಲಭ್ಯತೆಯಿಂದಾಗಿ ಇದೇ ಪ್ರಾಥಮಿಕ ಕೇಂದ್ರದಲ್ಲಿ ನಾಲ್ಕು ವರ್ಷದ ಮಗು ಮೃತಪಟ್ಟಿತ್ತೆನ್ನಲಾಗಿದ್ದು, ಖಾಯಂ ವೈದ್ಯರ ನೇಮಕಾತಿಗೆ ಒತ್ತಾಯಿಸಿ ಸಾರ್ವಜನಿಕರು ಅಂದು ಕೂಡ ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ್ದ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಅವರು ಎರಡು ದಿನಗಳ ಒಳಗಾಗಿ ಸೂಕ್ತ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರಾದರೂ, ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಮತ್ತೊಂದು ಸಾವು ನಡೆದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಾರ್ವಜನಿಕರು, ನಾಗರಹೊಳೆ-ಕೇರಳ ಅಂತರರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆಗೆ ಇಳಿದರು.

ಕುಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಮುತ್ತ ಸುಮಾರು 10 ಕಿ.ಮೀ ವ್ಯಾಪ್ತಿಯಲ್ಲಿ ದೊಡ್ಡ ದೊಡ್ಡ ಕಾಫಿ ತೋಟಗಳಿದ್ದು, ಸಾವಿರಾರು ಮಂದಿ ತೋಟ ಕಾರ್ಮಿಕರು ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಆದರೆ ಪ್ರಸಕ್ತ ಈ ಆರೋಗ್ಯ ಕೇಂದ್ರಕ್ಕೆ ವಾರದಲ್ಲಿ ಎರಡು ದಿನ ಕರ್ತವ್ಯಕ್ಕೆ ಡಾ. ಸತೀಶ್ ಎಂಬವರನ್ನು ನಿಯೋಜಿಸಲಾಗಿದ್ದು, ಉಳಿದ ದಿನಗಳಲ್ಲಿ ಇಲ್ಲಿ ವೈದ್ಯರು ಇಲ್ಲದೆ ರೋಗಿಗಳು ಪರದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ಸಾರ್ವಜನಿಕರ ಹೇಳಿಕೆ ಪ್ರಕಾರ ಸಕಾಲದಲ್ಲಿ ವೈದ್ಯರು ಲಭ್ಯವಾಗದೆ ಕಳೆದ ಎರಡು ತಿಂಗಳ ಅವಧಿಯಲ್ಲಿ ಸುಮಾರು 7 ಮಂದಿ ಸಾವಿಗೀಡಾಗಿರುವುದಾಗಿ ಹೇಳಲಾಗುತ್ತಿದೆ.

ಮತ್ತೊಂದೆಡೆ ಅಂತರರಾಜ್ಯ ಹೆದ್ದಾರಿಯಲ್ಲೇ ಈ ಪ್ರಾಥಮಿಕ ಆರೋಗ್ಯ ಕೇಂದ್ರವಿರುವುದರಿಂದ ಅಪಘಾತಗಳು ನಡೆದಾಗ ಪ್ರಾಥಮಿಕ ಚಿಕಿತ್ಸೆಗಾಗಿ ಗಾಯಾಳುಗಳನ್ನು ಇಲ್ಲಿಗೇ ಕರೆತರಲಾಗುತ್ತದೆ. ಆದರೆ ಖಾಯಂ ವೈದ್ಯರು ಇಲ್ಲದ ಹಿನ್ನೆಲೆಯಲ್ಲಿ ಸಕಾಲದಲ್ಲಿ ಪ್ರಾಥಮಿಕ ಚಿಕಿತ್ಸೆ ಲಭ್ಯವಾಗದೆ ಗಾಯಾಳುಗಳು ಸಾವನ್ನಪ್ಪುವ ಸಾಧ್ಯತೆಗಳೂ ಹೆಚ್ಚಾಗಿವೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಸಾರ್ವಜನಿಕರು ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ತಾಲೂಕು ವೈದ್ಯಾಧಿಕಾರಿ ಡಾ.ಯತಿರಾಜ್ ಅವರು ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಪ್ರಸಕ್ತ ವಾರದ ಎರಡು ದಿನ ಕುಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ. ಸತೀಶ್ ಅವರನ್ನು ವಾರದ ಎಲ್ಲಾ ದಿನಗಳಲ್ಲೂ ಇಲ್ಲಿಯೇ ಮುಂದುವರಿಸುವುದಾಗಿಯೂ, ಹುದಿಕೇರಿ, ಬಾಳೆಲೆ ಹಾಗೂ ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಪ್ರತೀ ಎರಡು ದಿನಗಳಿಗೊಮ್ಮೆ ರಾತ್ರಿ ಪಾಳಿಯಲ್ಲಿ ಈ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವಂತೆ ಮಾಡುವುದಾಗಿ ಭರವಸೆ ನೀಡಿದರು.

ತಾಲೂಕು ವೈದ್ಯಾಧಿಕಾರಿಯವರ ಭರವಸೆ ಮೇರೆಗೆ ಪ್ರತಿಭಟನಾಕಾರರು ತಮ್ಮ  ಪ್ರತಿಭಟನೆಯನ್ನು ಹಿಂಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News