ಫೇಸ್ಬುಕ್ ನಲ್ಲಿ ಅಶ್ಲೀಲ ಪದ ಬಳಕೆ ಆರೋಪ: ಕ್ರಮಕ್ಕೆ ಒತ್ತಾಯಿಸಿ ಮೂಡಿಗೆರೆ ಠಾಣೆಗೆ ಮುತ್ತಿಗೆ

Update: 2019-03-20 14:39 GMT

ಮೂಡಿಗೆರೆ, ಮಾ.20: ಅನ್ಯಧರ್ಮೀಯ ಯುವತಿಯೋರ್ವಳು ಮುಸ್ಲಿಂ ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ರೆಕಾರ್ಡ್ ಹರಿಯಬಿಟ್ಟಿದ್ದಾಳೆನ್ನಲಾದ ಘಟನೆಯ ಬಗ್ಗೆ ರೊಚ್ಚಿಗೆದ್ದ ಮಹಿಳೆಯರು ಹಾಗೂ ಪುರುಷರು ನೂರಾರು ಸಂಖ್ಯೆಯಲ್ಲಿ ಬುಧವಾರ ಮೂಡಿಗೆರೆ ಪೊಲೀಸ್ ಠಾಣೆ ಎದುರು ಜಮಾಯಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪಟ್ಟಣ ಸಮೀಪದ ಬಿಳಗುಳ ಇಂದಿರಾನಗರದ ನಿವಾಸಿ ಎನ್ನಲಾದ ರಜನಿಗೌಡ ಎಂಬ ಹೆಸರಿನ ಫೇಸ್ಬುಕ್ ಖಾತೆಯಿಂದ ಮಾ.16ರಂದು ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಮಹಿಳೆಯರನ್ನು ಹಾಗೂ ಅವರು ಧರಿಸುವ ಧಾರ್ಮಿಕ ಉಡುಗೆ ಬುರ್ಖಾದ ಬಗ್ಗೆಯೂ ಅಶ್ಲೀಲ ಪದ ಬಳಸಿ ನಿಂದಿಸಿ, ಪೋಸ್ಟ್ ಹಾಕಲಾಗಿತ್ತು. ಇದರಿಂದ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಖಾತೆಯ ವಿರುದ್ಧ ಬಿಳಗುಳದ ನಿವಾಸಿ ಆಯಿಶಾಬಿ ಎಂಬುವವರು ಪೊಲೀಸರಿಗೆ ದೂರು ನೀಡಲು ಹೋದ ಸಂದರ್ಭ ಪಿಎಸ್‍ಐ ಬೆಂಗಳೂರಿಗೆ ಹೋಗಿದ್ದಾರೆ. ಸಿಪಿಐ ಇಲ್ಲ ಎಂಬ ನೆಪವೊಡ್ಡಿ ದೂರು ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ ಎನ್ನಲಾಗಿದ್ದು, ಈ ವಿಚಾರ ತಿಳಿಯುತ್ತಿದ್ದಂತೆ ಮೂಡಿಗೆರೆ ಪಟ್ಟಣದ, ಬಿಳಗುಳ, ಹೆಸಗಲ್, ಹ್ಯಾಂಡ್‍ಪೋಸ್ಟ್, ಕೃಷ್ಣಾಪುರ, ಬಾಪುನಗರ ಮತ್ತಿತರೆ ಕಡೆಗಳಿಂದ ನೂರಾರು ಸಂಖ್ಯೆಯಲ್ಲಿ ಠಾಣೆ ಎದುರು ಜಮಾಯಿಸಿ, ದೂರು ದಾಖಲಿಸಿ ರಜನಿ ಗೌಡಳನ್ನು ಬಂಧಿಸುವಂತೆ ಒತ್ತಾಯಿಸಿದರು. ಒತ್ತಡಕ್ಕೆ ಮಣಿದ ಪೊಲೀಸರು ದೂರು ದಾಖಲಿಸಿಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ದೂರುದಾರೆ ಆಯಿಶಾಬಿ ಮಾತನಾಡಿ, ಮುಸ್ಲಿಂ ಜನಾಂಗವನ್ನು ಕೆಲ ಮತಾಂಧರು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸುತ್ತಾ ವಿಕೃತ ಆನಂದ ಪಡುತ್ತಿರುವುದು ಮಾಮೂಲಿಯಾಗಿದೆ. ಈಗ ಯುವತಿಯೋರ್ವಳು ಮುಸ್ಲಿಂ ಮಹಿಳೆಯರನ್ನು ಅಶ್ಲೀಲ ಪದ ಬಳಸಿ ನಿಂದಿಸಿದ್ದಾಳೆ. ಇದುವರೆಗೂ ನಾವು ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿದ್ದೆವು. ಇನ್ನುಮುಂದೆ ಸುಮ್ಮನಿರಲು ಸಾಧ್ಯವಿಲ್ಲ. ಮುಸ್ಲಿಂ ಮಹಿಳೆಯರನ್ನು ಅಸಭ್ಯವಾಗಿ ನಿಂದಿಸಿದ ರಜನಿಗೌಡ ಎಂಬಾಕೆಯನ್ನು ಕೂಡಲೇ ಪೊಲೀಸರು ಬಂಧಿಸಬೇಕು. ಇಲ್ಲವಾದರೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಹೆಸಗಲ್ ಗ್ರಾಪಂ ಮಾಜಿ ಸದಸ್ಯೆ ಐಸಮ್ಮ, ಮೈಮುನಾ, ನಬೀಸಾ, ಝೀನತ್, ಆಯಿಶಾ, ಶಾಹಿನಾ, ಸಫಿಯಾ, ಪರ್ವಿನ್, ಅಸ್ಮಾ, ರೆಹಾನ, ಪೀಸ್ ಅಂಡ್ ಅವೆರ್‍ನೆಸ್ ಟ್ರಸ್ಟ್ ಅಧ್ಯಕ್ಷ ಅಲ್ತಾಫ್ ಬಿಳಗುಳ, ಎಸ್‍ಡಿಪಿಐ ಅಧ್ಯಕ್ಷ ಮಹಮ್ಮದ್ ರಫೀಕ್, ಎಂ.ಯು.ಷರೀಫ್, ನದೀಮ್, ಮುಹಮ್ಮದ್ ಇಬ್ರಾಹಿಂ, ರಿಝ್ವಾನ್, ಅಣ್ಣು, ಅಮ್ಜದ್, ಅಹಮದ್, ಇಮ್ರಾನ್ ಮತ್ತಿತರರು ಇದ್ದರು.

ಬಿಳಗುಳದ ಯುವತಿ ರಜನಿಗೌಡ ಮುಸ್ಲಿಂ ಮಹಿಳೆಯರಿಗೆ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿರುವ ಬಗ್ಗೆ ದೂರು ದಾಖಲಿಸಲಾಗಿದೆ. ಪಿಎಸ್‍ಐಯವರು ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿದ್ದಾರೆ. ಬಂದ ಕೂಡಲೇ ಆಕೆಯ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು.

-ಗೋಪಾಲ್, ಎಎಸ್‍ಐ, ಮೂಡಿಗೆರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News