ಧಾರವಾಡದಲ್ಲಿ ಕಟ್ಟಡ ಕುಸಿತ ದುರಂತ: ತಂದೆ-ಮಗ ಸೇರಿ 7 ಮಂದಿ ಮೃತ್ಯು

Update: 2019-03-20 14:01 GMT

ಬೆಂಗಳೂರು, ಮಾ.20: ಧಾರವಾಡ ನಗರದಲ್ಲಿ ಬಹುಮಹಡಿ ವಾಣಿಜ್ಯ ಸಂಕಿರ್ಣ ಕಟ್ಟಡ ಕುಸಿದು ಬಿದ್ದ ಪ್ರಕರಣ ಸಂಬಂಧ ತಂದೆ-ಮಗ ಸೇರಿ 7 ಜನರು ಮೃತಪಟ್ಟಿದ್ದು, ಅವಶೇಷಗಳಡಿ ಸಿಲುಕಿದ್ದ 55 ಜನರನ್ನು ರಕ್ಷಣೆ ಮಾಡಲಾಗಿದೆ.

ಧಾರವಾಡ ಮರಾಠಾ ಕಾಲನಿ ನಿವಾಸಿ ಮಹೇಶ್ ಹಿರೇಮಠ್(60) ಇವರ ಪುತ್ರ ಅಶೀತ್ ಹಿರೇಮಠ(32), ಹುಬ್ಬಳ್ಳಿ ಆನಂದನಗರ ನಿವಾಸಿ ಸಲೀಂ ಮಕಾಂದಾರ್ (35), ಹುಬ್ಬಳ್ಳಿ ಶಕ್ತಿ ನಗರ ನಿವಾಸಿ ಮಾಬುಬ್ ಸಾಬ್ ರಾಯಚೂರ(48), ಹುಬ್ಬಳ್ಳಿ ಆನಂದನಗರ ನಿವಾಸಿ ಮೆಹಬುಸಾಬ್ ದೇಸಾಯಿ, ಅಶ್ರಫ್ ಶೇಖ್(48) ಮೃತಪಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ಇನ್ನಿಬ್ಬರ ಮೃತ ದೇಹಗಳು ಪತ್ತೆಯಾಗಿದ್ದು, ಅವರ ವಿವರ ತಿಳಿದುಬಂದಿಲ್ಲ. ಮೃತರ ಸಂಬಂಧಿಕರಿಂದ ದಾಖಲೆ ಪಡೆದುಕೊಂಡು, ಶವ ಪರೀಕ್ಷೆಯ ನಂತರ ಶವ ಹಸ್ತಾಂತರ ಮಾಡುವುದಾಗಿ ಜಿಲ್ಲಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ನಮ್ಮ ಅಂದಾಜಿನ ಪ್ರಕಾರ ಕಟ್ಟಡದ ತಳಭಾಗದಲ್ಲಿ ಇನ್ನೂ 15-20 ಜನ ಸಿಲುಕಿಕೊಂಡಿದ್ದಾರೆ. ರಾಜ್ಯದಿಂದ ಎಸ್‌ಡಿಆರ್‌ಎಫ್ ಹಾಗೂ ಕೇಂದ್ರದಿಂದ ಎನ್‌ಡಿಆರ್‌ಎಫ್ ತಂಡವನ್ನು ಕರೆಸಲಾಗಿದ್ದು, ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಟ್ಟಡದ ಅವಶೇಷಗಳ ನಾಲ್ಕು ಕಡೆಗಳಲ್ಲಿ ಜನ ಇದ್ದಾರೆ ಎಂಬ ಕುರುಹು ಸಿಕ್ಕಿದೆ. ಅವರನ್ನು ರಕ್ಷಣೆ ಮಾಡುವುದು ನಮ್ಮ ಮೊದಲ ಕರ್ತವ್ಯ ಎಂದು ಅಗ್ನಿಶಾಮಕ ಇಲಾಖೆ ಡಿಜಿಪಿ ಎಂ.ಎನ್.ರೆಡ್ಡಿ ತಿಳಿಸಿದರು.

ದೂರು: ಕಟ್ಟಡದ ಮಾಲಕರ ಮೇಲೆ ಮಂಗಳವಾರ 304 ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದ್ದು, ಅದಕ್ಕಾಗಿ ಒಂದು ತಂಡ ರಚನೆ ಮಾಡಿ ಸದ್ಯದಲ್ಲೇ ಅವರನ್ನು ಬಂಧಿಸಲಿದ್ದೇವೆ ಎಂದು ತಿಳಿಸಿದರು.

ತುರ್ತು ಪರಿಹಾರ

ಬಹುಮಹಡಿ ಕಟ್ಟಡ ದುರಂತ ಪ್ರಕರಣ ಸಂಬಂಧ ಮಾನವೀಯತೆ ಆಧಾರದಲ್ಲಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಅಂತ್ಯ ಸಂಸ್ಕಾರಕ್ಕೂ ತಲಾ 5 ಸಾವಿರ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ತಲಾ 1ಲಕ್ಷ ನೆರವು ನೀಡಲಾಗುವುದು.

-ತುಷಾರ ಗಿರಿನಾಥ, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News