ನಾಳೆಯಿಂದ ಎಸೆಸೆಲ್ಸಿ ಪರೀಕ್ಷೆ: ರಾಜ್ಯಾದ್ಯಂತ ಸಕಲ ಸಿದ್ಧತೆ

Update: 2019-03-20 15:53 GMT

ಬೆಂಗಳೂರು, ಮಾ.20: ರಾಜ್ಯಾದ್ಯಂತ ಇಂದಿನಿಂದ ಎಸೆಸೆಲ್ಸಿ ಪರೀಕ್ಷೆಗಳು ಆರಂಭವಾಗಲಿದ್ದು, ಎ.4 ರವರೆಗೂ ನಡೆಯಲಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಯಾವುದೇ ಅಹಿತರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ರಾಜ್ಯದ 2847 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ. ಅದರಲ್ಲಿ 46 ಸೂಕ್ಷ್ಮ, 7 ಅತಿಸೂಕ್ಷ್ಮ ಕೇಂದ್ರಗಳು ಎಂದು ಗುರುತಿಸಲಾಗಿದೆ. ಅಲ್ಲದೆ, 1057 ಕ್ಲಸ್ಟರ್‌ ರಹಿತ ಹಾಗೂ 1698 ಕ್ಲಸ್ಟರ್ ಕೇಂದ್ರಗಳು ಎಂದು ವಿಂಗಡಿಸಲಾಗಿದೆ. ಖಾಸಗಿ ಅಭ್ಯರ್ಥಿಗಳಿಗಾಗಿ ಜಿಲ್ಲಾ ಕೇಂದ್ರಗಳಲ್ಲಿ 92 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ.

ನಾಳೆಯಿಂದ ನಡೆಯಲಿರುವ ಪರೀಕ್ಷೆಯಲ್ಲಿ 4,47,864 ಗಂಡು ಮಕ್ಕಳು, 3,93,802 ಹೆಣ್ಣು ಮಕ್ಕಳು ಸೇರಿದಂತೆ 8,41,666 ವಿದ್ಯಾರ್ಥಿಗಳು ಅದೃಷ್ಟ ಪರೀಕ್ಷೆಯನ್ನು ಎದುರಿಸಲಿದ್ದಾರೆ. 4651 ವಿಕಲಚೇತನ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 1451 ಅರ್ಹ ವಿಕಲಚೇತನರಿಗೆ ಭಾಷಾ ವಿನಾಯಿತಿ ಹಾಗೂ 480 ವಿದ್ಯಾರ್ಥಿಗಳಿಗೆ ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಬದಲಾಗಿ ಪರ್ಯಾಯ ವಿಷಯಗಳನ್ನು ಬರೆಯಲು ಅವಕಾಶ ನೀಡಲಾಗಿದೆ.

ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಗಳನ್ನು ನಮೂದಿಸಲಾಗುತ್ತಿದ್ದು, ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದ್ದು, ಮೊಬೈಲ್, ಸ್ಮಾರ್ಟ್‌ಪೋನ್, ಸ್ಮಾರ್ಟ್ ವಾಚ್‌ಗಳು ಸೇರಿದಂತೆ ಮತ್ತಿತರ ವಸ್ತುಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ನಿಷೇಧಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮುನ್ನ 15 ನಿಮಿಷಗಳ ಕಾಲ ಪ್ರಶ್ನೆಪತ್ರಿಕೆ ಓದಲು ಅವಕಾಶ ನೀಡಲಾಗಿದೆ.

ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೊಳಗಾಗದೆ ನಿರ್ಭೀತರಾಗಿ ಪರೀಕ್ಷೆಯನ್ನು ಬರೆಯಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳ 200 ಮೀಟರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಅಂಗಡಿಗಳನ್ನು ಮುಚ್ಚುವಂತೆ ಸೂಚನೆ ನೀಡಲಾಗಿದೆ.

ಎ.10 ರಿಂದ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ 230 ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಯಲಿದೆ. 77,754 ನೋಂದಾಯಿತ ಮೌಲ್ಯಮಾಪಕರ ಪೈಕಿ ಅರ್ಹ ಮೌಲ್ಯಮಾಪಕರನ್ನು ನಿಯೋಜನೆ ಮಾಡಲಾಗುತ್ತದೆ. ಮೌಲ್ಯಮಾಪನದ ನಂತರ ವೆಬ್‌ಸೈಟ್, ಸಂದೇಶಗಳ ಮೂಲಕ ಫಲಿತಾಂಶ ಸಿಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News