×
Ad

ಶಾಸಕ ಆನಂದ್ ಸಿಂಗ್ ಮೇಲಿನ ಹಲ್ಲೆ ಪ್ರಕರಣ: ಆದೇಶ ಕಾಯ್ದಿರಿಸಿದ ಕೋರ್ಟ್

Update: 2019-03-20 22:28 IST

ಬೆಂಗಳೂರು, ಮಾ.20: ತಮ್ಮ ಮೇಲೆ ಶಾಸಕ ಗಣೇಶ್ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣ ಸಂಬಂಧ ತಮ್ಮ ವಾದ ಆಲಿಸುವಂತೆ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾ. 25ಕ್ಕೆ ಆದೇಶ ಕಾಯ್ದಿರಿಸಿದೆ.

ನ್ಯಾಯಾಂಗ ಬಂಧನದಲ್ಲಿರುವ ಕಂಪ್ಲಿ ಗಣೇಶ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇನ್ನೊಂದೆಡೆ ತಮಗೆ ವಾದ ಮಂಡಿಸಲು ಆನಂದ್ ಸಿಂಗ್ ಪರ ವಕೀಲರು ಕಾಲಾವಕಾಶ ಕೇಳಿದ್ದರು. ಇದರಂತೆ ಬುಧವಾರ ವಾದ ಮಂಡಿಸುತ್ತಿದ್ದ ಗಣೇಶ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಆನಂದ್ ಸಿಂಗ್ ವಕೀಲರು ಅಭಿಯೋಜಕರಿಗೆ ಸಹಾಯಕರಾಗಬಹುದು. ಆದರೆ ಪ್ರತ್ಯೇಕವಾಗಿ ವಾದ ಮಂಡಿಸುವಂತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ವಾದ ಮಂಡಿಸಲು ಕಾಲಾವಕಾಶ ಕಲ್ಪಿಸಲಾಯಿತು. ವಾದ ಪೂರ್ಣಗೊಂಡ ಬಳಿಕ ಮಾ. 25ಕ್ಕೆ ನ್ಯಾಯಾಲಯ ಆದೇಶ ಕಾಯ್ದಿರಿಸಿದೆ.

ಏನಿದು ಪ್ರಕರಣ: ಕಳೆದ ಜ.19ರಂದು ಈಗಲ್ ಟನ್ ರೆಸಾರ್ಟ್‌ನಲ್ಲಿ ಕಂಪ್ಲಿ ಶಾಸಕ ಗಣೇಶ್, ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದರು. ನಂತರ ಆನಂದ್ ಸಿಂಗ್‌ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News