ಸಮಾವೇಶಕ್ಕೆ ಹೊರಗಿನ ಜನರನ್ನು ಕರೆತಂದ ಸುಮಲತಾ: ಡಿ.ಸಿ.ತಮ್ಮಣ್ಣ

Update: 2019-03-21 16:09 GMT

ಮಂಡ್ಯ, ಮಾ.21: ನಗರದಲ್ಲಿ ನಡೆದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಸಮಾವೇಶಕ್ಕೆ ಹೊರ ಜಿಲ್ಲೆಯಿಂದ ಜನರನ್ನು ಕರೆತರಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಆರೋಪಿಸಿದ್ದಾರೆ.

ಮದ್ದೂರು ಬಳಿ ವೈದ್ಯನಾಥಪುರ ಗ್ರಾಮದಲ್ಲಿ ವೈದ್ಯನಾಥೇಶ್ವರ ದೇವಾಲಯದಲ್ಲಿ ಗುರುವಾರ ಪೂಜೆ ಸಲ್ಲಿಸಿ ಜೆಡಿಎಸ್ ಕಾಂಗ್ರೆಸ್ ಪಕ್ಷದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಮತ ಪ್ರಚಾರ ಮಾಡಿದ ವೇಳೆ ಅವರು ಮಾತನಾಡಿದರು. ಸುಮಲತಾ ಸಮಾವೇಶಕ್ಕೆ ಬಂದವರ ಪೈಕಿ ಮಂಡ್ಯ ಜಿಲ್ಲೆಯವರು ಕಡಿಮೆ. ಮೈಸೂರು, ಚನ್ನಪಟ್ಟಣ, ರಾಮನಗರದಿಂದ ಜನ ಕರೆಸಲಾಗಿದೆ. ಅವರಿಗಿಂತ ಹತ್ತುಪಟ್ಟು ಅಭಿಮಾನಿಗಳು ಕುಮಾರಸ್ವಾಮಿ ಅವರಿಗೆ ಇದ್ದಾರೆ ಎಂದು ಅವರು ಹೇಳಿದರು.

ನಿಖಿಲ್ ಕುಮಾರಸ್ವಾಮಿ ಅವರು ಗುರುವಾರ ಒಂದು ಸೆಟ್ ನಾಮಪತ್ರ ಸಲ್ಲಿಸಲು ವ್ಯವಸ್ಥೆ ಮಾಡಲಾಗಿತ್ತು. ಸಿಎಂ ಕುಮಾರಸ್ವಾಮಿ ಅವರು ಮಾ.25 ರಂದೆ ನಾಮಪತ್ರ ಸಲ್ಲಿಸೋಣ ಎಂದು ಸೂಚಿಸಿದರು ಎಂದು ಅವರು ತಿಳಿಸಿದರು.

ಕಾಂಗ್ರೆಸ್‍ನವರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತೇವೆ. ಈಗಾಗಲೇ ಸುಮಲತಾ ಜೊತೆ ಗುರುತಿಸಿಕೊಂಡವರೊಂದಿಗೆ ಮಾತುಕತೆ ಮಾಡಲಾಗಿದೆ. ಇನ್ನು ಮುಂದೆ ರಾಜ್ಯದಲ್ಲಿ ಸಮಿಶ್ರ ಸರಕಾರವೇ ಆಡಳಿತಕ್ಕೆ ಬರುವುದು. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಒಂದಾಗಿ ಹೋಗೋಣ ಬನ್ನಿ ಎಂದು ಕರೆಯುತ್ತಿದ್ದೇವೆ. ಕೆಲವರು ಸಂತೋಷದಿಂದ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಜತೆ ಬರುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ಚಿತ್ರನಟ ಯಶ್ ಮತ್ತು ದರ್ಶನ್ ಅವರಿಗಿಂತ ಹತ್ತುಪಟ್ಟು ಅಭಿಮಾನಿಗಳನ್ನು ಸಿಎಂ ಕುಮಾರಸ್ವಾಮಿ ಅವರಿಗೆ ರಾಜ್ಯದಲ್ಲಿ ಇದ್ದಾರೆ. ಆದರೆ, ಯಾರು ಯಾರನ್ನು ವಿರೋಧ ಮಾಡಬಾರದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಸಂದೀಪ್, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಕೆ.ದಾಸೇಗೌಡ, ಮುಖಂಡರಾದ ಎನ್.ಎಂ.ರಾಮಲಿಂಗಯ್ಯ, ಚಿಕ್ಕಂಕನಹಳ್ಳಿ ಮನು, ಶಿವರಾಜ್, ಕಾಳೀರಯ್ಯ ಇನ್ನಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News