ಕಾಂಗ್ರೆಸ್ ಮುಖಂಡರು ಕಾಗದದ ಹುಲಿಗಳಿದ್ದಂತೆ: ಕೆ.ಎಸ್.ಈಶ್ವರಪ್ಪ

Update: 2019-03-21 17:23 GMT

ಶಿವಮೊಗ್ಗ, ಮಾ. 21: ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್ ಗುಂಡೂರಾವ್‍ರವರು ಕಾಗದದ ಹುಲಿಗಳಿದ್ದಂತೆ. ಪಕ್ಷ ವಿರೋಧಿ ಹೇಳಿಕೆ ನೀಡಿದ ಅವರ ಪಕ್ಷದ ಶಾಸಕರ ವಿರುದ್ಧವೇ ಅವರಿಗೆ ಶಿಸ್ತು ಕ್ರಮ ಜರುಗಿಸಲು ಆಗಲಿಲ್ಲ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. 

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಸಚಿವ ಡಿ.ಕೆ.ಶಿವಕುಮಾರ್ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸುವುದರಿಂದ ಬಿಜೆಪಿಗೆ ಯಾವುದೇ ತೊಂದರೆಯಿಲ್ಲ. ಸಂಘಟನೆ, ವೈಚಾರಿಕತೆ ಮತ್ತು ನಾಯಕತ್ವದ ಆಧಾರದ ಮೇಲೆ ಬಿಜೆಪಿ ದೇಶಾದ್ಯಂತ ಚುನಾವಣೆ ಎದುರಿಸಲಿದೆ ಎಂದರು. 

ವಿಳಂಬವೇಕೆ?: ಕಲಬುರಗಿಯ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಶಾಸಕ ಉಮೇಶ್ ಜಾಧವ್‍ರವರು ಈಗಾಗಲೇ ಸ್ಪೀಕರ್ ರಮೇಶ್‍ಕುಮಾರ್ ರವರಿಗೆ ಖುದ್ದು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಆದರೆ ಇಲ್ಲಿಯವರೆಗೂ ಸ್ಪೀಕರ್ ರಾಜೀನಾಮೆ ಅಂಗೀಕರಿಸದಿರುವುದೇಕೆ? ಕಾನೂನು ತಿಳಿದುಕೊಂಡಿರುವವರೇ ಹೀಗೆ ಮಾಡಿದರೆ ಹೇಗೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಇತ್ತೀಚೆಗೆ ನಡೆದ ಕಾಂಗ್ರೆಸ್-ಜೆಡಿಎಸ್ ಜಂಟಿ ಸಭೆಯಲ್ಲಿ, ಬಿಜೆಪಿ 2 ಅಂಕಿ ದಾಟಲು ಬಿಡುವುದಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ. ಆದರೆ ಆ ಸಭೆಯಲ್ಲಿ ಎಚ್.ಕೆ.ಪಾಟೀಲ್ ಮತ್ತು ಪರಮೇಶ್ವರ್ ಗೈರಾಗಿದ್ದರು. ಇದು ಮೈತ್ರಿಕೂಟದಲ್ಲಿರುವ ಭಿನ್ನಮತಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಹಿಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಎರಡಂಕಿ ದಾಟಲು ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಆಗ ಮೋದಿ ಪ್ರಧಾನಿ ಆಗಿರಲಿಲ್ಲ. ಈಗ ಮೋದಿ ವಿಶ್ವ ಪ್ರಸಿದ್ಧಿ ಪಡೆದಿದ್ದಾರೆ. ಹಾಗಾಗಿ ಅವರ ಪಕ್ಷವೇ ಎರಡಂಕಿ ದಾಟುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. 

ಪಟ್ಟಿ ಬಿಡುಗಡೆ: ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಚುನಾವಣೆ ಸಮಿತಿಯ ಪ್ರಮುಖರೊಂದಿಗೆ ಸಭೆ ನಡೆದಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧೆ ಮಾಡಬೇಕು ಎಂದು ಚರ್ಚಿಸಲಾಗಿದ್ದು, ಎರಡು ದಿನದಲ್ಲಿ ರಾಷ್ಟ್ರೀಯ ಅಧ್ಯಕ್ಷರು ಪಟ್ಟಿ ಬಿಡುಗಡೆ ಮಾಡಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಕನಿಷ್ಠ 20 ರಿಂದ 25 ಸ್ಥಾನ ಗೆಲ್ಲುವ ವಿಶ್ವಾಸ ತಮ್ಮದಾಗಿದೆ ಎಂದು ಇದೇ ಸಂದರ್ಭದಲ್ಲಿ ಕೆ.ಎಸ್.ಈಶ್ವರಪ್ಪ ಆತ್ಮವಿಶ್ವಾಸ ವ್ಯಕ್ತಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News