ಕಳೆದ ಬಾರಿಗಿಂತ ಹೆಚ್ಚಿನ ಅಂತರದಿಂದ ಗೆಲುವು: ಸಂಸದ ಧ್ರುವನಾರಾಯಣ್ ವಿಶ್ವಾಸ

Update: 2019-03-21 17:59 GMT

ಮೈಸೂರು,ಮಾ.21: ಕಳೆದ ಬಾರಿಗಿಂತ ಈ ಬಾರಿ ಅತಿ ಹೆಚ್ಚು ಅಂತರದಿಂದ ಗೆಲುವು ಸಾಧಿಸಲಿದ್ದೇನೆ ಎಂದು ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಗುರುವಾರ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಗೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ದಲಿತರ ಮತ ಯಾವಾಗಲು ಕಾಂಗ್ರೆಸ್ ಗೆ. ದಲಿತರು ಯಾವುದೇ ಕಾರಣಕ್ಕೂ ಕೋಮುವಾದಿಗಳಿಗೆ ಮತ ನೀಡಲ್ಲ ಎಂದು ಶ್ರೀನಿವಾಸ್ ಪ್ರಸಾದ್ ಗೆ ತಿರುಗೇಟು ನೀಡಿದರು.

ಮಾ.25ಕ್ಕೆ ಚಾಮರಾಜ ನಗರದಲ್ಲಿ ನಾಮಪತ್ರ ಸಲ್ಲಿಸಲಿದ್ದೇನೆ, ಈ ವೇಳೆ ಕಾಂಗ್ರೆಸ್ ನ ರಾಜ್ಯ ನಾಯಕರು ಹಾಗೂ ಸಚಿವರಾದ ಸಾ.ರಾ ಮಹೇಶ್, ಜಿಟಿ ದೇವೇಗೌಡ, ಶಾಸಕರಾದ ಅಶ್ವಿನ್ ಕುಮಾರ್ ಭಾಗಿಯಾಗಲಿದ್ದಾರೆ. ನನ್ನ ಅಭಿವೃದ್ಧಿಯೇ ನನಗೆ ಗೆಲುವಿಗೆ ಸಹಕಾರಿಯಾಗಲಿದೆ, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಉತ್ತಮ ಆಡಳಿತ ನೀಡಿದೆ. ಇವೆಲ್ಲವೂ ನನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ನಂತರ ಪೂರ್ವ ಭಾವಿ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಸಿಕ್ಕ ಅವಕಾಶ ಬಳಸಿಕೊಂಡು, ಮತದಾರರಿಗೆ ಗೌರವ ತರುವ ಕೆಲಸ ಮಾಡಿದ್ದೇನೆ. ಎಲ್ಲೂ ಕೂಡ ಮತದಾರರಿಗೆ ಅಗೌರವ ತರುವ ಕೆಲಸ ಮಾಡಿಲ್ಲ. 365 ದಿನಗಳಲ್ಲಿ 100 ದಿನ ಅಧಿವೇಶನದಲ್ಲಿ ಭಾಗವಹಿಸಬೇಕು. ಕೇಂದ್ರದ ಎಂಪಿ ಅನುದಾನ ವಿಶೇಷವಾಗಿ ಬರುತ್ತದೆ. ಅನುದಾನವನ್ನು ಸಂಪೂರ್ಣವಾಗಿ ಯಾವುದೇ ಎಂಪಿಗಳು ಸದ್ಬಳಕೆ ಮಾಡಿಕೊಂಡಿಲ್ಲ. ಆದರೆ ನಾನು ಕೇಂದ್ರ ಸರ್ಕಾರದ ಅನುದಾನವನ್ನು ರಸ್ತೆ ಅಭಿವೃದ್ಧಿಗೆ ಹೆಚ್ಚು ಬಳಸಿದ್ದೇನೆ. ಕಳೆದ ಹತ್ತು ವರ್ಷಗಳಲ್ಲಿ ನಾನು ಉತ್ತಮ ಯೋಜನೆಗಳನ್ನು ತಂದಿದ್ದೇನೆ. ನನಗೆ ಕೆಲಸ ಮಾಡುವ ಹುಮ್ಮಸ್ಸು ಇದೆ, ಚೈತನ್ಯ ಇದೆ. ಹೀಗಾಗಿ ಮತ್ತೊಮ್ಮೆ ನೀವು ನನಗೆ ಮತ ಹಾಕಿ, ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಕೇಂದ್ರದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷಯಾಗಿ ಅಧಿಕಾರಕ್ಕೆ ಬಂತು. ಆದರೆ ನರೇಂದ್ರ ಮೋದಿ ನಿರೀಕ್ಷೆಯಂತೆ ಕೆಲಸ ಮಾಡಿಲ್ಲ. ಸಾಕಷ್ಟು ಕೆಲಸ ಮಾಡುವ ಅವಕಾಶ ಇತ್ತು, ಆದರೆ ಯಾವುದನ್ನೂ ಮಾಡಲಿಲ್ಲ. ಸರ್ಜಿಕಲ್ ಸ್ಟ್ರೈಕ್ ಅಂತಾರೆ, ರೈತರಿಗೆ 6 ಸಾವಿರ ಹಣ ನೀಡಿದ್ದೇವೆ ಅಂತಾರೆ. ಈ ಎರಡು ವಿಚಾರಗಳನ್ನೂ ಬಿಟ್ಟು ಮತ್ತೇನೂ ಮಾತನಾಡುವುದಿಲ್ಲ. ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಚೋದನೆ ಮೂಲಕ ಮತ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News