ಬಿಜೆಪಿ ಕೇವಲ ವ್ಯಾಪಾರಿಗಳ, ಶ್ರೀಮಂತರ ಪರವಿದೆ: ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ

Update: 2019-03-21 18:09 GMT

ಮೈಸೂರು,ಮಾ.21: ಬಿಜೆಪಿ ಕೇವಲ ವ್ಯಾಪಾರಿಗಳ ಹಾಗೂ ಶ್ರೀಮಂತರ ಪರ ಇರುವ ಪಕ್ಷ. ಸುಳ್ಳು ಹೇಳೋದೇ ಬಿಜೆಪಿ ಕೆಲಸ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ವರುಣಾ ಮತ್ತು ತಗಡೂರು ಬ್ಲಾಕ್, ಕಾಂಗ್ರೆಸ್ ಸಮಿತಿ ವರುಣಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಚುನಾವಣೆ ದೇಶದ ಭವಿಷ್ಯವನ್ನು ರೂಪಿಸುವ ಚುನಾವಣೆಯಾಗಿದೆ. ಕಳೆದ 5 ವರ್ಷದಲ್ಲಿ ದೇಶ ಅವನತಿಯತ್ತ ಸಾಗಿದೆ. ದೇಶದ ಸಂವಿಧಾನದ ಮೇಲೆ ಕೇಂದ್ರ ಸರ್ಕಾರಕ್ಕೆ ನಂಬಿಕೆಯೇ ಇಲ್ಲ. ಸಂವಿಧಾನ ವಿರೋಧವಾಗಿ ಕೇಂದ್ರ ಸಚಿವರೇ ಮಾತನಾಡುತ್ತಾರೆ. ಬಿಜೆಪಿ ವಿರುದ್ಧ ರೈತರು  ಪ್ರತಿಭಟನೆಗಿಳಿದಿದ್ದಾರೆ. ರೈತರ ಸಾಲಮನ್ನಾ ವಿಚಾರದಲ್ಲಿ ಕೇಂದ್ರ ಸರ್ಕಾರ ಇಲ್ಲಿಯವರೆಗೂ ಸ್ಪಂದಿಸಲಿಲ್ಲ. ನಮ್ಮ ಮೈತ್ರಿ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಸಿದ್ದರಾಮಯ್ಯ ಸರ್ಕಾರವಿದ್ದಾಗ ರೈತ ಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಿದರು.

ಬಿಜೆಪಿ ಯಾವಾಗಲು ವ್ಯಾಪಾರಿಗಳ ಹಾಗೂ ಶ್ರೀಮಂತರ ಪರ ಯೋಚನೆ ಮಾಡುತ್ತದೆ. ನಮ್ಮ ಸರ್ಕಾರ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿತ್ತು, ಬಿಜೆಪಿ ಶ್ರೀಮಂತರಿಗೆ ಅನುಕೂಲವಾಗುವ ರೀತಿ ಆಡಳಿತ ನಡೆಸಿದೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಯವರು ಸುಳ್ಳು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ದೇಶವನ್ನ ಕೊಳ್ಳೆ  ಹೊಡೆದಿದ್ದಾರೆ. ನಮ್ಮ ಪಕ್ಷದ ಸಾಧನೆಯನ್ನು ಪ್ರತಿ ಗ್ರಾಮದ ಮನೆಗಳಿಗೂ ತಲುಪುವ ಹಾಗೆ ಮಾಡಬೇಕು. ಆ ಮೂಲಕ ಧ್ರುವನಾರಾಯಣ್ ಗೆ ಗೆಲುವನ್ನು ತಂದುಕೊಡಬೇಕು. ದೇಶದ ಸಂಸದರಲ್ಲಿ 5ನೇ ಅತ್ಯುತ್ತಮ ಹಾಗೂ ರಾಜ್ಯದ ಮೊದಲ ಸಂಸದ ಆರ್.ಧ್ರುವನಾರಾಯಣ್. ಸೇಡು ತೀರಿಸಿಕೊಳ್ಳುವ ನಾಯಕನ ಬದಲು ಅಭಿವೃದ್ಧಿ ಬಯಸುವ ವ್ಯಕ್ತಿಯನ್ನು ಗೆಲ್ಲಿಸಿ ಎಂದು ಯತೀಂದ್ರ ಸಿದ್ದರಾಮಯ್ಯ ಕರೆ ನೀಡಿದರು.

ಬಳಿಕ ಮಾತನಾಡಿದ ಮಾಜಿ ಸಚಿವೆ ಗೀತಾ ಮಹದೇವ್ ಪ್ರಸಾದ್, ಧ್ರುವನಾರಾಯಣ್ ರನ್ನು ಒಮ್ಮೆ ಕೇಂದ್ರ ಸಚಿವರನ್ನಾಗಿ ನೋಡುವಾಸೆ. ದೇಶದ ಅತ್ಯುತ್ತಮ ಸಂಸದರಲ್ಲಿ 5ನೇ ಹಾಗೂ ರಾಜ್ಯದ ಮೊದಲ ಸಂಸದರನ್ನು ನಾವು ಹೊಂದಿದ್ದೇವೆ ಎಂದರೆ ಖುಷಿ ಪಡಬೇಕಿದೆ. ಅಭಿವೃದ್ಧಿಯ ವಿಚಾರದಲ್ಲಿ ಧ್ರುವನಾರಾಯಣ್ ಯಾವಾಗಲು ಮುಂದೆ ಇರುತ್ತಾರೆ. ಈ ಹಿನ್ನೆಲೆ ಅವರನ್ನು ಮತ್ತೊಮ್ಮೆ ಗೆಲ್ಲಿಸುವ ಮೂಲಕ ಕೇಂದ್ರ ಸಚಿವರನ್ನಾಗಿಸಬೇಕು ಎಂದು ಹೇಳಿದರು.

ಪೂರ್ವಭಾವಿ ಸಭೆಯಲ್ಲಿ ವಿಧಾಸಭಾ ಸದಸ್ಯರಾದ ಅನಿಲ್ ಚಿಕ್ಕಮಾದು, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಬಾಲರಾಜ್, ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ರಂಗಸ್ವಾಮಿ, ಕಾಂಗ್ರೆಸ್ ಮುಖಂಡರಾದ ಬಿ.ಎಂ.ರಾಮು, ಗುರುಪಾದಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News