ದೊರಕದ ಮಳೆಹಾನಿ ಪರಿಹಾರ: ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Update: 2019-03-22 11:55 GMT

ಮಡಿಕೇರಿ, ಮಾ.22: ಕಳೆದ ಸಾಲಿನ ಪ್ರಕೃತಿ ವಿಕೋಪದ ಸಂದರ್ಭ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿರುವ ನಗರದ ಮುಳಿಯ ಬಡಾವಣೆ ಹಾಗೂ ವಿದ್ಯಾನಗರ ರಸ್ತೆ ನಿವಾಸಿಗಳಿಗೆ ಅನಾಹುತ ನಡೆದು ಹಲವು ತಿಂಗಳುಗಳೇ ಕಳೆದಿದ್ದರೂ ಯಾವುದೇ ಪರಿಹಾರ ದೊರಕದೆ ಇರುವುದರಿಂದ ಮುಂಬರುವ ಲೋಕಸಭೆ ಮತ್ತು ನಗರಸಭೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಮುಳಿಯ ಬಡಾವಣೆಯ ನಿವಾಸಿಗಳ ಸಂಘದ ಅಧ್ಯಕ್ಷ ಪಿ.ಎಂ. ಸುರೇಶ್ ಹಾಗೂ ಇತರರು, ಕಳೆದ ಆಗಸ್ಟ್ 15ರಿಂದ ವಾರಗಳ ಕಾಲ ಸುರಿದ ಭಾರೀ ಮಳೆದ ಮುಳಿಯ ಬಡಾವಣೆ ಸೇರಿದಂತೆ ವಿದ್ಯಾನಗರ ರಸ್ತೆಯ ಆಸುಪಾಸಿನ ನೂರಕ್ಕೂ ಅಧಿಕ ಮನೆಗಳಿಗೆ  ನೀರು ನುಗ್ಗಿ, ಗೃಹೋಪಯೋಗಿ ವಸ್ತುಗಳು, ವಾಹನಗಳು ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳು ಹಾನಿಗೀಡಾಗಿವೆ. ಅಲ್ಲದೆ, ಮನೆಗಳು, ತಡೆಗೋಡೆಗಳು ಬಿರುಕು ಬಿಟ್ಟು ನಿಂತಿವೆಯೆಂದು ತಿಳಿಸಿದರು.

ಮಳೆಗಾಲದಲ್ಲಿ ಮುಳಿಯ ಬಡಾವಣೆ ಮತ್ತು ಸುತ್ತಮುತ್ತಲ ಭಾಗ ಸಮುದ್ರದಂತೆ ಭಾಸವಾಗುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ದೋಣಿಯ ಮೂಲಕ ಅಲ್ಲಿನ ನಿವಾಸಿಗಳನ್ನು ಪಾರು ಮಾಡಲಾಗಿತ್ತಾದರು, ಆ ಬಳಿಕ ನಗರ ಸಭೆಯಿಂದ ಯಾವುದೇ ಸ್ಪಂದನ ದೊರಕಿಲ್ಲವೆಂದು ದೂರಿದರು. 

ಕುಶಾಲನಗರದಲ್ಲಿ ಕಾವೇರಿ ನದಿ ನೀರು ಮನೆಗಳಿಗೆ ನುಗ್ಗಿ ಹಾನಿಯಾದ ಸಂದರ್ಭ ಅಲ್ಲಿನ ಪಟ್ಟಣ ಪಂಚಾಯತ್ ನವರು ಮುತುವರ್ಜಿ ವಹಿಸಿ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಮಾಡುವುದರೊಂದಿಗೆ ತಲಾ 53,800 ರೂ.ಗಳ ಪರಿಹಾರವನ್ನು ಒದಗಿಸಿದ್ದರು. ಅದೇ ರೀತಿ ನಗರಸಭೆಯಿಂದ ತಮಗೂ ಪರಿಹಾರ ಒದಗಿಸಬೇಕೆಂದು ನಗರಸಭೆಗೆ ಅರ್ಜಿ ಸಲ್ಲಿಸಲಾಗಿದ್ದರೂ, ಅಲ್ಲಿನ ಅಧಿಕಾರಿಗಳಾಗಲಿ, ಕಂದಾಯ ಅಧಿಕಾರಿಗಳಾಗಲಿ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಆರೋಪಿಸಿದರು.

ಅರ್ಜಿ ಸಲ್ಲಿಸಿ ನಾಲ್ಕು ತಿಂಗಳು ಕಳೆದರು ನಗರಸಭೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಶ್ರೀವಿದ್ಯಾ ಅವರನ್ನು ಸಂಪರ್ಕಿಸಿದಾಗ, ಇದುವರೆಗೂ ಅರ್ಜಿ ಸಲ್ಲಿಸದೆ ವಿಳಂಬ ಮಾಡಿರುವ ಬಗ್ಗೆ ತಿಳಿಸಿದ್ದರಲ್ಲದೆ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದ್ದರು ಮತ್ತು ಅರ್ಜಿಯನ್ನು ಉಪ ವಿಭಾಗಾಧಿಕಾರಿಗಳಿಗೆ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು ಎಂದು ತಿಳಿಸಿದರು.

ಆ ಬಳಿಕ ನಗರಸಭೆ ಅಧ್ಯಕ್ಷರನ್ನು ಸಂಪರ್ಕಿಸಿದಾಗ ಅವರು ನಗರಸಭೆಯಿಂದ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು ಎಂದು ಟೀಕಿಸಿದ ಅವರು, ಕುಶಾಲನಗರ ಪಟ್ಟಣ ಪಂಚಾಯತ್ ನ ಜನ ಪ್ರತಿನಿಧಿಗಳಿಗೆ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ದೊರಕಿಸಿಕೊಡಲು ಸಾಧ್ಯವಾಗಿರುವಾಗ ನಗರಸಭೆಯ ಜನಪ್ರತಿನಿಧಿಗಳಿಗೆ ಅದು ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರಲ್ಲದೆ, ಇಂತಹ ಜನಪ್ರತಿನಿಧಿಗಳ ಅಗತ್ಯ ಮಡಿಕೇರಿ ಜನತೆಗೆ ಇದೆಯೇ ಎಂದು ಬೇಸರ ವ್ಯಕ್ತಪಡಿಸಿದರು.

ಸಂತ್ರಸ್ತರ ಪೈಕಿ ಹಲವಾರು ಮಂದಿ ಮಾಜಿ ಸೈನಿಕರೂ ಇದ್ದು, ಮಡಿಕೇರಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದ ಸಂದರ್ಭ ಮಾಜಿ ಸೈನಿಕರು ಅರ್ಜಿ ನೀಡಿದಾಗ, ಸೈನಿಕ ಇಲಾಖೆಯ ಮೂಲಕ ಅರ್ಜಿ ನೀಡುವಂತೆ ಸೂಚಿಸಿದ್ದರು. ಆ ಬಳಿಕ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ ಎಂದು ಹೇಳಿದರು. 

ಸಂತ್ರಸ್ತರಿಗೆ ಪರಿಹಾರ ದೊರಕಿಸಿಕೊಡುವಂತೆ ನಗರಸಭೆ, ಕಂದಾಯ ಇಲಾಖೆ, ಶಾಸಕರು, ಉಸ್ತುವಾರಿ ಸಚಿವರಾದಿಯಾಗಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ನೂರಾರು ಬಾರಿ ಕಚೇರಿಗಳಿಗೆ ಅಲೆದಾಡಿದರೂ ಸಂತ್ರಸ್ತರ ನೋವಿಗೆ ಯಾರಿಂದಲೂ ಸ್ಪಂದನೆ ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭೆ ಹಾಗೂ ನಗರಸಭೆ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿರುವುದಾಗಿ ಅವರು ಹೇಳಿದರು.

ಮುಳಿಯ ಬಡಾವಣೆಯ ಮೂಲಕ ಹಾದು ಹೋಗುವ ರಾಜ ಕಾಲುವೆಯನ್ನು ಅಭಿವೃದ್ಧಿ ಪಡಿಸಬೇಕು. ವಿದ್ಯಾನಗರ ರಸ್ತೆಯಲ್ಲಿರುವ ಅತಿ ಕಿರಿದಾಗಿರುವ ಸೇತುವೆಯಿಂದಾಗಿ ಈ ಪ್ರದೇಶ ಮುಳುಗಡೆಯಾಗುತ್ತಿದ್ದು, ಅಲ್ಲಿ ದೊಡ್ಡ ಸೇತುವೆ ನಿರ್ಮಾಣ ಮಾಡಬೇಕು. ಅಲ್ಲದೆ, ರಾಜಕಾಲುವೆಯುದ್ದಕ್ಕೂ ತಡೆಗೋಡೆ ನಿರ್ಮಿಸಿ ಕಾಲುವೆಯ ನೀರು ಮನೆಗಳಿಗೆ ನುಗ್ಗದಂತೆ ತಡೆಯಬೇಕು ಎಂದು ಅವರು ಇದೇ ಸಂದರ್ಭ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಕೆ.ಟಿ. ಗಣೇಶ್, ಸಂಜು ಅಚ್ಚಯ್ಯ, ಪಿ.ಎನ್. ಬಸಪ್ಪ, ಜಯಂತಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News