ಪ್ರೌಢಶಾಲಾ ಶಿಕ್ಷಕರಿಂದ ಮೌಲ್ಯಮಾಪನ ಬಹಿಷ್ಕಾರ ಎಚ್ಚರಿಕೆ

Update: 2019-03-22 13:04 GMT

ಬೆಂಗಳೂರು, ಮಾ.22: ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಮೌಲ್ಯಮಾಪನ ಬಹಿಷ್ಕಾರಕ್ಕೆ ಕರೆ ನೀಡಿದ್ದ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಕೂಗು ಕುಗ್ಗುತ್ತಿದ್ದಂತೆಯೇ ಪ್ರೌಢಶಾಲಾ ಶಿಕ್ಷಕರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಬೇಸಿಗೆ ರಜಾ ಅವಧಿ ಕಡಿಮೆ ಮಾಡಿರುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಸರಕಾರಿ ಪಿಯು ಕಾಲೇಜು ಉಪನ್ಯಾಸಕರ ಸಂಘವು ಮೌಲ್ಯಮಾಪನ ಮಾಡುವುದಿಲ್ಲ ಎಂದು ಹೇಳಿತ್ತು. ಬಳಿಕ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಸರಕಾರದ ಮಧ್ಯಪ್ರವೇಶದಿಂದಾಗಿ ರಜಾ ಅವಧಿ ವಿಸ್ತರಣೆ ಮಾಡಿ, ಮತ್ತಿತರೆ ಬೇಡಿಕೆಗಳು ಈಡೇರಿಸುವ ಭರವಸೆ ನೀಡಿದ್ದರು. ಹೀಗಾಗಿ, ಪ್ರತಿಭಟನೆ ಹಿಂಪಡೆದಿದ್ದರು.

ಆದರೆ, ಇದೀಗ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಗಳು ಎ.4 ಕ್ಕೆ ಕೊನೆಗೊಂಡು ಎ.10 ರಿಂದ ಮೌಲ್ಯಮಾಪನ ನಡೆಯಲಿದೆ. ಇದರ ನಡುವೆ, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘವು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮುಷ್ಕರ ಮಾಡುವುದಾಗಿ ಸರಕಾರಕ್ಕೆ ಸಂದೇಶ ನೀಡಿದ್ದಾರೆ.

ಪ್ರೌಢಶಾಲಾ ಶಿಕ್ಷಕರಿಗೆ 17 ದಿನ ರಜಾ ಕಡಿತ ಮಾಡುವುದನ್ನು ವಾಪಸ್ ಪಡೆಯಬೇಕು. ಶಿಕ್ಷಕರ ಸಂಭಾವನೆ ಹಾಗೂ ದಿನಭತ್ತೆಯನ್ನು ಪ್ರತಿವರ್ಷ ಪರಿಷ್ಕರಿಸಿ ಶೇ.10ರಷ್ಟು ನೀಡಬೇಕು ಎಂಬ ನಿರ್ಧಾರ ಜಾರಿ ಮಾಡಿಲ್ಲ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ವೆಚ್ಚವು ಕಡಿಮೆಯಾಗುತ್ತಿದ್ದು, ವಿದ್ಯಾರ್ಥಿಗಳ ಶುಲ್ಕ ಹೆಚ್ಚಳವಾಗುತ್ತಿದೆ ಎಂದು ಆಪಾದಿಸಿದ್ದಾರೆ.

ರಜಾ ಅವಧಿಯಲ್ಲಿ ಶಿಕ್ಷಕರು ಮೌಲ್ಯಮಾಪನ ಕಾರ್ಯದಲ್ಲಿರುತ್ತಾರೆ. ಸಂಭಾವನೆ ಹಾಗೂ ದಿನಭತ್ತೆ ಮರುಪರಿಶೀಲಿಸಿ ಶೇ.10ರಷ್ಟು ಹೆಚ್ಚಳ ನೀಡಬೇಕು ಎಂದು ಸಂಘದ ಅಧ್ಯಕ್ಷ ಎಚ್.ಕೆ.ಮಂಜುನಾಥ್ ಆಗ್ರಹಿಸಿದ್ದಾರೆ. ಸರಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಜೂನ್ ತಿಂಗಳಲ್ಲಿ ಶಾಲೆ ಆರಂಭವಾಗುವಾಗ ಪ್ರತಿಭಟನೆಯ ಹಾದಿ ಹಿಡಿಯಲು ಸಂಘದ ಸರ್ವ ಸದಸ್ಯರ ಸಭೆ ಕರೆದು ನಿರ್ಣಯಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News