ಸರಳ ವ್ಯಕಿತ್ವದ ಜನಾನುರಾಗಿಯ ನಿಧನದಿಂದ ಆಘಾತ: ಮಾಜಿ ಸಿಎಂ ಸಿದ್ದರಾಮಯ್ಯ

Update: 2019-03-22 13:25 GMT

ಬೆಂಗಳೂರು, ಮಾ. 22: ಸುದೀರ್ಘ ಕಾಲದ ನನ್ನ ಸ್ನೇಹಿತರಾದ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ಆಘಾತಕ್ಕೀಡಾಗಿದ್ದೇನೆ ಎಂದು ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವಳ್ಳಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. 

ಸಿ.ಎಸ್.ಶಿವಳ್ಳಿ ಅವರು ಮೆಲುಮಾತಿನ, ಸರಳ ವ್ಯಕ್ತಿತ್ವದ, ಜನಾನುರಾಗಿ ನಾಯಕರಾಗಿದ್ದರು. ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಿದ್ದರಾಮಯ್ಯ ಟ್ವೀಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಉತ್ತಮ ನಾಯಕ: ಶಿವಳ್ಳಿಯವರ ನಿಧನ ನನಗೆ ಅತೀವ ಆಘಾತವನ್ನುಂಟು ಮಾಡಿದೆ. ಆರೋಗ್ಯವಾಗಿದ್ದ ಕೊನೆ ಕ್ಷಣದವರೆಗೂ ಧಾರವಾಡ ಕಟ್ಟಡ ಕುಸಿತದ ತೆರವು ಪ್ರಕ್ರಿಯೆಯ ಉಸ್ತುವಾರಿ ವಹಿಸಿದ್ದರು. ರಾಜ್ಯ ಹಾಗೂ ಪಕ್ಷ ಒಬ್ಬ ಉತ್ತಮ ನಾಯಕನನ್ನು ಕಳೆದುಕೊಂಡಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಂತಾಪ ಸೂಚಿಸಿದ್ದಾರೆ.

ಮುಗ್ಧ ವ್ಯಕ್ತಿ: ಶಿವಳ್ಳಿ ನಿಧನವನ್ನು ಕಂಡು ಬಹಳ ಆಘಾತವಾಯಿತು. ನಿಜವಾದ ಸರಳ ಸಜ್ಜನ, ಮುಗ್ಧ ವ್ಯಕ್ತಿ. ರಾಜಕಾರಣ ಮಾಡುವ ವ್ಯಕ್ತಿಯಲ್ಲ, ಇನ್ನೊಬ್ಬರ ಬಗ್ಗೆ ಹಗುರವಾಗಿ ಎಂದೂ ಮಾತನಾಡುತ್ತಿರಲಿಲ್ಲ. ವಾಜಪೇಯಿ ಗೌರವ ಅರ್ಪಣೆ ಮಾಡುವ ಕಾರ್ಯಕ್ರಮಕ್ಕೆ ಬಂದ ಏಕೈಕ ವ್ಯಕ್ತಿ ಶಿವಳ್ಳಿ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಸಹಾಯಕರನ್ನು ಇರಿಸಿ ಅಲ್ಲಿ ತನ್ನ ಹೆಸರು ಹೇಳಿದ ರೋಗಿಗಳನ್ನು ಆಸ್ಪತ್ರೆಗೆ ತೋರಿಸಿ ಅವರು ಖರ್ಚು ವೆಚ್ಚಗಳನ್ನ ಭರಿಸುತ್ತಿದ್ದರು ಎಂದು ಜಗದೀಶ್ ಶೆಟ್ಟರ್ ಸ್ಮರಿಸಿದ್ದಾರೆ.

ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ನನ್ನ ಸ್ನೇಹಿತ, ಅವರು ನೋಡಲು ಹಳ್ಳಿಯವರಂತೆ ಕಂಡರೂ ಬುದ್ಧಿವಂತರು, ಆರೋಗ್ಯವಾಗಿದ್ದ ಶಿವಳ್ಳಿಗೆ ಏಕಾಏಕಿ ಹೃದಯಾಘಾತವಾಗಿರುವುದು ದುಃಖಕರ ಸಂಗತಿ. ಜನಪ್ರಿಯ ವ್ಯಕ್ತಿ. ಕ್ಷೇತ್ರದ ಜನರ ಜೊತೆ ಬಂಧುಗಳಂತೆ ಇದ್ದರು’

-ಡಾ.ಎಲ್.ಹನುಮಂತಯ್ಯ, ರಾಜ್ಯಸಭಾ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News