ಬಳ್ಳಾರಿಯಲ್ಲಿ ಅಭಿವೃದ್ಧಿ ಪರ್ವಕ್ಕೆ ಚಾಲನೆ: ಡಿ.ಕೆ.ಶಿವಕುಮಾರ್

Update: 2019-03-22 15:48 GMT

ಬೆಂಗಳೂರು, ಮಾ.22: ಬಳ್ಳಾರಿ ಜಿಲ್ಲೆಯ ಪರಿಸ್ಥಿತಿ ಈ ಹಿಂದೆ ಹೇಗಿತ್ತು. ಈಗ ಯಾವ ರೀತಿಯ ಬದಲಾವಣೆಗಳಾಗಿವೆ ಎಂಬುದು ಜನರ ಮುಂದೆಯೇ ಇದೆ. ಬಳ್ಳಾರಿಯಲ್ಲಿ ಅಭಿವೃದ್ಧಿ ಕೆಲಸಗಳ ಪರ್ವಕ್ಕೆ ಚಾಲನೆ ನೀಡಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಬಡವರಿಗೆ ಹಿಂಸೆ ಕೊಡುವ ಪ್ರವೃತ್ತಿಯನ್ನು ಕೊನೆಗಾಣಿಸಲಾಗಿದೆ. ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ ಎಂದರು.

ಜಿಲ್ಲೆಯ ವ್ಯಾಪ್ತಿಯಲ್ಲಿ ಬಹಳಷ್ಟು ಉದ್ಯೋಗಗಳು ಖಾಲಿಯಿವೆ. ಹೀಗಾಗಿ ಅರ್ಹರನ್ನು ಆಯಾ ಸ್ಥಾನಗಳಿಗೆ ಆಯ್ಕೆ ಮಾಡಲು ಮುಂದಾಗಿದ್ದೇವೆ. ಜಿಲ್ಲೆಯಲ್ಲಿ ಜವಳಿ ಪಾರ್ಕ್ ಆರಂಭಿಸಲು ಚಿಂತನೆ ನಡೆದಿದ್ದು, ಬಡವರ ಮನೆಗಳ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗುತ್ತಿದ್ದು, ಈ ಸಂಬಂಧ ಒಂದು ಸಾವಿರ ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

ಬಿಜೆಪಿ ಶಾಸಕ ಬಿ.ಶ್ರೀರಾಮುಲು ಅಣ್ಣನವರು ಹಿರಿಯ ನಾಯಕರು. ಚುನಾವಣೆಯಲ್ಲಿ ಅವರ ತಂತ್ರ, ನನ್ನ ಮಂತ್ರ ಏನೂ ಇಲ್ಲ. ನಾನು ಶ್ರೀರಾಮುಲು ಮೇಲೆ ಯುದ್ಧ ಮಾಡಲು ಹೋಗುವುದಿಲ್ಲ. ಅವರು ಎಷ್ಟು ಬೇಕಾದರೂ ತಂತ್ರ, ಕುತಂತ್ರ ಮಾಡಲಿ ಎಂದು ಶಿವಕುಮಾರ್ ವ್ಯಂಗ್ಯವಾಡಿದರು. ಬೆನ್ನಿಗೆ ಚೂರಿ ಹಾಕುವವರನ್ನು ನಂಬುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡ ಶಿವಕುಮಾರ್, ಒಂದು ಬಾರಿ ಯಾವುದಾದರೂ ಪಕ್ಷಕ್ಕೆ ಸೇರಿದ ನಂತರ ಮೂಲ, ವಲಸಿಗರು ಎನ್ನುವ ಮಾತೇ ಬರುವುದಿಲ್ಲ ಎಂದರು.

ಉಮೇಶ್ ಜಾಧವ್, ದೇವೇಂದ್ರಪ್ಪ ಹಾಗೂ ಎ.ಮಂಜು ಕಾಂಗ್ರೆಸ್‌ನಲ್ಲಿದ್ದವರು. ಅವರು ಬಿಜೆಪಿಗೆ ಸೇರುತ್ತಿದ್ದಂತೆ ಅವರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕಿದೆ. ಪಕ್ಷದ ನಿರ್ಧಾರಗಳಿಗೆ ಪ್ರತಿಯೊಬ್ಬರೂ ಬದ್ಧರಾಗಿರಬೇಕು. ಅದನ್ನೇ ಕುಮಾರಸ್ವಾಮಿ ತಮ್ಮ ಧಾಟಿಯಲ್ಲಿ ಹೇಳಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರಕಾರದ ನೀತಿಗಳಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಜಿಎಸ್‌ಟಿಯಿಂದ ಯಾವ ರೀತಿಯ ಹೊಡೆತ ಬಿದ್ದಿದೆ ಗೊತ್ತೇ ? ನೀವು ವ್ಯಾಪಾರಿಗಳಾಗಿದ್ದರೆ ಅದರ ಕಷ್ಟ ಅರ್ಥವಾಗಿರುತ್ತದೆ ಎಂದು ಶಿವಕುಮಾರ್ ತಿಳಿಸಿದರು.

ದೇಶದ ಜನತೆಗೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ನರೇಂದ್ರಮೋದಿ ಭರವಸೆ ನೀಡಿದ್ದರು. ಆದರೆ, ಈ ಐದು ವರ್ಷಗಳಲ್ಲಿ ಎಷ್ಟು ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ ? ದೇಶದಲ್ಲಿ ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಅತೀ ಹೆಚ್ಚಾಗಿದೆ. ಯುವಕರು ಉದ್ಯೋಗವಿಲ್ಲದೆ ಪರದಾಡುವಂತಾಗಿದೆ ಎಂದು ಶಿವಕುಮಾರ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News