ಮಂಡ್ಯ: ಬಿಕ್ಕಟ್ಟು ಶಮನ ಪ್ರಯತ್ನಕ್ಕೆ 'ಕೈ' ನಾಯಕರಿಂದ ನೀರಸ ಪ್ರತಿಕ್ರಿಯೆ

Update: 2019-03-22 16:17 GMT

ಮಂಡ್ಯ, ಮಾ.22: ಲೋಕಸಭೆ ಚುನಾವಣಾ ಹಿನ್ನೆಲೆಯಲ್ಲಿ, ಜೆಡಿಎಸ್-ಕಾಂಗ್ರೆಸ್ ನಡುವೆ ಉದ್ಭವಿಸಿರುವ ಬಿಕ್ಕಟ್ಟು ಶಮನಗೊಳಿಸುವ ಪ್ರಯತ್ನ ಮುಂದುವರಿದಿದ್ದು, ಕಾಂಗ್ರೆಸ್ ನಾಯಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೋಟೆಲ್‍ವೊಂದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಶುಕ್ರವಾರ ನಡೆದ  ಸಭೆಯಲ್ಲಿ ಒಂದು ಗುಂಪಿನ ಕಾಂಗ್ರೆಸ್ ಮುಖಂಡರು ಮಾತ್ರ ಪಾಲ್ಗೊಂಡಿದ್ದರಿಂದ ಸಂಧಾನ ವಿಫಲಗೊಂಡಿದೆ.

ಸುಮಲತಾ ಅಂಬರೀಷ್ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದ ಕಾಂಗ್ರೆಸ್ ಪ್ರಮುಖರು, ಅವರಿಗೆ ಪರೋಕ್ಷವಾಗಿ ಬೆಂಬಲವಾಗಿ ನಿಂತಿದ್ದ ಪ್ರಮುಖರ ಗೈರು ಹಾಜರಿಯಲ್ಲಿ ಸಭೆ ಮುಕ್ತಾಯಗೊಂಡಿತು.

ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮೈಷುಗರ್ ಮಾಜಿ ಅಧ್ಯಕ್ಷ ಹಾಲಹಳ್ಳಿ ರಾಮಲಿಂಗಯ್ಯ, ಡಿಸಿಸಿ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಅಮರಾವತಿ ಚಂದ್ರಶೇಖರ್ ಸಂಧಾನ ಸಭೆಯಲ್ಲಿ ಪಾಲ್ಗೊಂಡಿದ್ದರು. ಮಾಜಿ ಶಾಸಕರಾದ ಎನ್.ಚಲುವರಾಯಸ್ವಾಮಿ, ರಮೇಶ್‍ ಬಾಬು ಬಂಡಿಸಿದ್ದೇಗೌಡ, ಪಿ.ಎಂ.ನರೇಂದ್ರಸ್ವಾಮಿ, ಕೆ.ಬಿ.ಚಂದ್ರಶೇಖರ್ ಹಾಗೂ ಇತರ ಪ್ರಮುಖ ಕಾಂಗ್ರೆಸ್ ಧುರೀಣರ ಗೈರು ಹಾಜರಾಗಿದ್ದರಿಂದ ಸಭೆ ವಿಫಲಗೊಂಡಿತೆಂದು ಅರ್ಥೈಸಲಾಗಿದೆ. ಸುಮಲತಾ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಹಾಜರಿದ್ದ ಕಾಂಗ್ರೆಸ್ ಮುಖಂಡರನ್ನು ಆಹ್ವಾನಿಸಲು ಸಂಧಾನಕಾರರು ನಡೆಸಿದ ಪ್ರಯತ್ನವೂ ವಿಫಲಗೊಂಡಿತು.

ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಎಸ್.ಪುಟ್ಟರಾಜು, 25ರಂದು ನಾಮಪತ್ರ ಸಲ್ಲಿಸುವ ದಿನದಂದು ದೂರ ಸರಿದಿರುವ ಎಲ್ಲ ಕಾಂಗ್ರೆಸ್ ಪ್ರಮುಖರೂ ಹಾಜರಿರುತ್ತಾರೆ. ಅವರ ಮನವೊಲಿಸುವ ಕೆಲಸ ಮುಂದುವರಿಯಲಿದೆ. ಚಲುವರಾಯಸ್ವಾಮಿ ಅವರನ್ನು ಸ್ವತಃ ಅಭ್ಯರ್ಥಿ ನಿಖಿಲ್ ಭೇಟಿ ಮಾಡಿ ಮನವೊಲಿಸಲಿದ್ದಾರೆ ಎಂದು ವಿವರಿಸಿದರು.

ಮೈತ್ರಿ ಧರ್ಮ ಪಾಲನೆ ಆಗುತ್ತದೆ. ಈ ಸಂಬಂಧ ಯಾರೊಬ್ಬರೂ ವರಿಷ್ಠರ ಅನುಮತಿ ಇಲ್ಲದೆ ಹೇಳಿಕೆ ನೀಡಬಾರದೆಂದು ಆದೇಶಿಸಲಾಗಿದೆ. ನಿಖಿಲ್ ನಾಮಪತ್ರ ಸಲ್ಲಿಸುವುದರೊಳಗೆ ಬಿಕ್ಕಟ್ಟು ಸಂಪೂರ್ಣ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

25ರಂದು ಮಧ್ಯಾಹ್ನ 12ಕ್ಕೆ ನಗರದ ಕಾಳಿಕಾಂಭ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ನಿಖಿಲ್ ನಾಮಪತ್ರ ಸಲ್ಲಿಸಲಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಎರಡೂ ಪಕ್ಷಗಳ ಹಲವಾರು ಪ್ರಮುಖರು ಜೊತೆಗೂಡಲಿದ್ದಾರೆ. ನಂತರ ನಡೆಯುವ ಸಮಾವೇಶದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರ ಸೇರುವ ನಿರೀಕ್ಷೆಯಲ್ಲಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಪುಟ್ಟರಾಜು ಕೋರಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ರಾಷ್ಟ್ರ ಮಟ್ಟದಲ್ಲಿ ಕೋಮುವಾದಿ ಬಿಜೆಪಿಯನ್ನು ದೂರವಿಡುವುದೇ ನಮ್ಮ ಗುರಿ. ಆದ್ದರಿಂದ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಈ ಬಾರಿ ಮೈತ್ರಿ ಅಭ್ಯರ್ಥಿಯನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಲು ನಮ್ಮ ಪಕ್ಷದವರು ಮುಂದಾಗಿರುವುದಾಗಿ ತಿಳಿಸಿದರು.

ಜೆಡಿಎಸ್ ಅಭ್ಯರ್ಥಿ ನಿಖಿಲ್ ಮಾತನಾಡಿ, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರು ಬೇರೆಯವರನ್ನು ಕೀಳಾಗಿ ಮಾತನಾಡುವುದು ಬೇಡ. ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಡು ಮತಯಾಚನೆ ಮಾಡಿ ಎಂದು ಮನವಿ ಮಾಡಿದರು.

ಲೋಕಸಭಾ ಚುನಾವಣೆಯನ್ನು ಕೇವಲ ಚುನಾವಣೆಯನ್ನಾಗಿ ಎದುರಿಸುತ್ತೇವೆ. ಈ ಚುನಾವಣೆಯಿಂದ ನನ್ನ ಹಾಗೂ ಅಭಿಷೇಕ್ ನಡುವಿನ ಗೆಳೆತನಕ್ಕೆ ಯಾವುದೇ ರೀತಿಯ ಧಕ್ಕೆ ಬರುವುದಿಲ್ಲ. ನಾವು ಎಂದೆಂದಿಗೂ ಸಹೋದರರಂತೆ ಇರುತ್ತೇವೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News