ಲೋಕಸಭಾ ಚುನಾವಣೆಗೆ ಬಸ್‌ಗಳ ನಿಯೋಜನೆ: ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಸಾಧ್ಯತೆ

Update: 2019-03-22 17:17 GMT

ಬೆಂಗಳೂರು.ಮಾ.22: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯಕ್ಕಾಗಿ ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿ ವತಿಯಿಂದ ಸುಮಾರು 11 ಸಾವಿರ ಬಸ್‌ಗಳನ್ನು ನಿಯೋಜನೆ ಮಾಡಲಾಗಿದೆ. ಹೀಗಾಗಿ, ಸಾರಿಗೆ ಸಂಚಾರದಲ್ಲಿ ವ್ಯತ್ಯಯವುಂಟಾಗಲಿದೆ.

ಬೆಂಗಳೂರು ನಗರ ಸೇರಿದಂತೆ ಎ.18 ರಂದು ಚುನಾವಣೆ ನಡೆಯಲಿರುವ ಎಲ್ಲ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಾರಿಗೆ ಬಸ್‌ಗಳನ್ನೇ ನಿಯೋಜನೆ ಮಾಡಲಾಗಿದೆ. ನಗರದಲ್ಲಿ ಚುನಾವಣೆ ಕರ್ತವ್ಯಕ್ಕೆ ಭಾರಿ ಪ್ರಮಾಣದ ಬಸ್‌ಗಳನ್ನು ಬಳಸಿಕೊಳ್ಳುತ್ತಿರುವ ಹಿನ್ನೆಲೆ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಕೆಎಸ್ಸಾರ್ಟಿಸಿಯಿಂದ 3ರಿಂದ 4 ಸಾವಿರ ಬಸ್‌ಗಳು ಚುನಾವಣೆ ಕಾರ್ಯಕ್ಕಾಗಿ ನಿಯೋಜನೆಗೊಳ್ಳಲಿವೆ. ಆದುದರಿಂದಾಗಿ ಎ.17 ಮತ್ತು 19ರಂದು ಸರಕಾರಿ ರಜೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ದೂರದ ಊರಿಗೆ ಪ್ರಯಾಣಿಸುವ ಜನರಿಗೆ ಬಸ್ ವ್ಯತ್ಯಯ ಉಂಟಾಗಲಿದೆ. ಎ.18ರಂದು ರಾಜ್ಯದ 14 ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಬೆಂಗಳೂರು ಸುತ್ತಲಿನ ಜಿಲ್ಲೆಗೆ ತೆರಳುವವರಿಗೆ ಹೆಚ್ಚಿನ ಸಮಸ್ಯೆ ಆಗದಿದ್ದರೂ ಕರಾವಳಿ ಹಾಗೂ ಚಿತ್ರದುರ್ಗ ಕಡೆಗೆ ಪ್ರಯಾಣಿಸುವ ಜನರಿಗೆ ತೊಂದರೆಯಾಗಬಹುದು.

ಎ.18ರಂದು ಇತರೆ ನಿಗಮಗಳಿಂದ ಕೆಎಸ್ಸಾರ್ಟಿಸಿಗೆ ಕಾರ್ಯಾಚರಣೆ ನಡೆಸುವ ಜಿಲ್ಲೆಗೆ ಹೆಚ್ಚಿನ ಬಸ್ ಕಾರ್ಯಾಚರಣೆ ಮಾಡಲಿವೆ. ಎ.23ರಂದು ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಕೆಎಸ್ಸಾರ್ಟಿಸಿಯ ಹೆಚ್ಚಿನ ಬಸ್ ಬಳಕೆ ಆಗಲಿವೆ. ಪ್ರಯಾಣಿಕರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ತಿಳಿಸಿದ್ದಾರೆ.

ಪ್ರತಿದಿನ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಟಿಕೆಟ್‌ಗಳ ಮೇಲೆ ಹಾಗೂ ಬಸ್ ನಿಲ್ದಾಣಗಳಲ್ಲಿನ ಡಿಜಿಟಲ್ ಬೋರ್ಡ್‌ಗಳ ಮೇಲೆ ‘ನೀವು ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿದ್ದೀರಾ’ ಎಂಬ ಸಂದೇಶವನ್ನು ಬಿತ್ತರಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News