ಶೋಭಾ ಕರಂದ್ಲಾಜೆಯನ್ನು ಸೋಲಿಸಲು ಕೈಜೋಡಿಸಿ: ಜೆಡಿಎಸ್ ರಾಜ್ಯ ಉಪಾಧ್ಯಕ್ಷ ದೇವರಾಜ್ ಕರೆ

Update: 2019-03-22 17:22 GMT

ಚಿಕ್ಕಮಗಳೂರು, ಮಾ.22: ಕಳೆದ ಐದು ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಕ್ಷೇತ್ರದತ್ತ ತಿರುಗಿ ನೋಡದ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಕ್ಷೇತ್ರದ ಜನತೆ ಈ ಬಾರಿಯ ಚುನಾವಣೆಯಲ್ಲಿ ತಿರಸ್ಕರಿಸಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಕರೆ ನೀಡಿದ್ದಾರೆ.

ನಗರದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ನಡೆದ ಲೋಕಸಭಾ ಚುನಾವಣೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶೋಭಾ ಕರಂದ್ಲಾಜೆ ಅವರು ಸಂಸದರಾಗಿ ಆಯ್ಕೆಯಾದ ನಂತರ ಕ್ಷೇತ್ರದತ್ತ ಒಮ್ಮೆಯೂ ತಿರುಗಿ ನೋಡಿರಲಿಲ್ಲ. ಜಿಲ್ಲೆಯಲ್ಲಿ ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದ ರೈತರು ಮತ್ತು ಬೆಳೆಗಾರರು ತತ್ತರಿಸುತ್ತಿದ್ದರೂ, ಕ್ಷೇತ್ರದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿದ್ದರೂ ಅವುಗಳ ಬಗ್ಗೆ ಲೋಕಸಭೆಯಲ್ಲಿ ಶೋಭ ಎಂದೂ ಧ್ವನಿ ಎತ್ತಲಿಲ್ಲ ಎಂದು ಆರೋಪಿಸಿದರು.

ಐದು ವರ್ಷಗಳ ಅವಧಿಯಲ್ಲಿ ಕೇಂದ್ರ ಸರಕಾರದಿಂದ ಕ್ಷೇತ್ರಕ್ಕೆ ಒಂದೇ ಒಂದು ರೂಪಾಯಿ ಹಣವನ್ನು ಸಹ ತರಲಿಲ್ಲ. ಯಾವುದೇ ಅಭಿವೃದ್ಧಿ ಕೆಲಸವನ್ನೂ ಮಾಡಲಿಲ್ಲ. ಜನರ ಸಮಸ್ಯೆಗಳನ್ನು ಆಲಿಸಲು ಜಿಲ್ಲೆಯಲ್ಲಿ ಕನಿಷ್ಠ ಮನೆಯನ್ನೂ ಮಾಡಲಿಲ್ಲ ಎಂದು ಆರೋಪಿಸಿದ ದೇವರಾಜ್, ನಯಾಪೈಸೆಯಷ್ಟೂ ಕೆಲಸ ಮಾಡದ ಶೋಭಾ ಕರಂದ್ಲಾಜೆ ಅವರು ಮತ್ತೆ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದನ್ನು ನೋಡಿದರೆ ಅವರು ಕ್ಷೇತ್ರದ ಜನತೆಯನ್ನು ಲಘುವಾಗಿ ಪರಿಗಣಿಸಿದಂತೆ ಕಾಣುತ್ತದೆ ಎಂದರು.

ಕ್ಷೇತ್ರದ ಎಲ್ಲಾ ಜಾತ್ಯತೀತ ಪಕ್ಷಗಳೂ ಮತ್ತು ಜೆಡಿಎಸ್ ಕಾರ್ಯಕರ್ತರು ಶೋಭಾ ಅವರ ವಿರುದ್ಧ ಒಗ್ಗೂಡಿ ಕೆಲಸ ಮಾಡಬೇಕು. ಈಗಾಗಲೇ ಬಿಜೆಪಿಯವರು ಗೋ ಬ್ಯಾಕ್ ಶೋಭಾ ಚಳವಳಿ ನಡೆಸುತ್ತಿದ್ದು, ಅದಕ್ಕೆ ಕ್ಷೇತ್ರದ ಜನತೆ ಕೈಜೋಡಿಸಬೇಕು. ಜೆಡಿಎಸ್ ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿಯನ್ನು ಕಾರ್ಯಕರ್ತರು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ ಕುಮಾರ್, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿಯ ಗೆಲುವಿಗೆ ಪಕ್ಷದ ಕಾರ್ಯಕರ್ತರು ಪಣ ತೊಡಬೇಕು. ಮೈತ್ರಿ ಕೂಟದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕ್ಷೇತ್ರದ ಜನತೆ ಜನಪರವಾಗಿ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಪಕ್ಷದ ಮುಖಂಡರಾದ ಜಿ.ಎಸ್.ಚಂದ್ರಪ್ಪ, ಎಂ.ಎಸ್.ಬಾಲಕೃಷ್ಣೇಗೌಡ, ಎಂ.ಡಿ.ರಮೇಶ್, ಡಿ.ಕೆ.ಚಂದ್ರೇಗೌಡ, ನಿಸಾರ್ ಅಹ್ಮದ್, ಮಾನು ಮಿರಾಂಡ, ವಿನಯ್ ಕೋಟೆ, ಜ್ಯೋತಿ ಈಶ್ವರ್, ಶ್ರೀದೇವಿ, ದಿನೇಶ್, ಹೆಚ್.ಎನ್.ಕೃಷ್ಣೇಗೌಡ, ಮಲ್ಲೇದೇವರಪ್ಪ, ಉಮಾಪತಿ ಮತ್ತಿತರ ಮುಖಂಡರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News