ಅಸೀಮಾನಂದ ದೋಷಮುಕ್ತಿ: ಎನ್‌ಐಎ ಮೇಲ್ಮನವಿ ಸಲ್ಲಿಸದು ಎಂದ ರಾಜನಾಥ್ ಸಿಂಗ್

Update: 2019-03-23 04:14 GMT

ಹೊಸದಿಲ್ಲಿ, ಮಾ.23: ಸಂಜೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದ ಅವರನ್ನು ದೋಷಮುಕ್ತಗೊಳಿಸಿ ವಿಶೇಷ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಗೃಹಸಚಿವ ರಾಜನಾಥ್ ಸಿಂಗ್ ಪ್ರಕಟಿಸಿದ್ದಾರೆ. ಗೃಹ ಸಚಿವರ ಈ ನಿರ್ಧಾರ ಹಲವರ ಹುಬ್ಬೇರಿಸಿದೆ.

ಟೈಮ್ಸ್ ನೌ ಜತೆಗೆ ಮಾತನಾಡಿದ ಅವರು, "ನ್ಯಾಯಾಲಯ ತನ್ನ ತೀರ್ಪು ನೀಡಿದೆ. ಮೇಲ್ಮನವಿ ಸಲ್ಲಿಸಲು ಬಯಸುವವರು ಮೇಲ್ಮನವಿ ಸಲ್ಲಿಸಬಹುದು" ಎಂದು ಹೇಳಿದರು.

ಅಭಿಯೋಜನೆ ವತಿಯಿಂದ ಮೇಲ್ಮನವಿ ಸಲ್ಲಿಸಲಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ, "ಇಲ್ಲ. ಸರ್ಕಾರ ಏಕೆ ಮೇಲ್ಮನವಿ ಸಲ್ಲಿಸಬೇಕು? ಅದರಲ್ಲಿ ಯಾವುದೇ ಅರ್ಥ ಇಲ್ಲ" ಎಂದು ಉತ್ತರಿಸಿದರು. ಸಂಜೋತಾ ಸ್ಫೋಟ ಪ್ರಕರಣದ ಬಗ್ಗೆ ಹೊಸದಾಗಿ ತನಿಖೆ ನಡೆಸುವ ಸಾಧ್ಯತೆಯನ್ನೂ ಅವರು ಅಲ್ಲಗಳೆದರು.

"ಎನ್‌ಐಎ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದೆ. ಆ ಬಳಿಕವಷ್ಟೇ ಅವರು ಆರೋಪಪಟ್ಟಿ ಸಲ್ಲಿಸಿದ್ದಾರೆ. ಇದೀಗ ನ್ಯಾಯಾಲಯದ ತೀರ್ಪು ಹೊರಬಂದಿದೆ. ಅದರ ಮೇಲೆ ವಿಶ್ವಾಸ ಇಡಬೇಕು" ಎಂದು ಅಭಿಪ್ರಾಯಪಟ್ಟರು.

ವಾಸ್ತವವಾಗಿ ಮೇಲ್ಮನವಿ ಸಲ್ಲಿಸುವ ಮತ್ತು ಕಾನೂನು ಸಾಧ್ಯತೆಗಳನ್ನು ಪರಿಶೀಲಿಸುವ ವಿಚಾರ ತನಿಖಾ ಸಂಸ್ಥೆಗೆ ಬಿಟ್ಟದ್ದು. ಆದರೆ ಇದೀಗ ಸಚಿವರು ನೀಡಿರುವ ಹೇಳಿಕೆ ಸರ್ಕಾರದ ನಿಲುವನ್ನು ತನಿಖಾ ಸಂಸ್ಥೆಯ ಮೇಲೆ ಹೇರಿದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News