×
Ad

ಚಿಕ್ಕಮಗಳೂರು: ಈಜಲು ತೆರಳಿದ್ದ ಒಂದೇ ಕುಟುಂಬದ ನಾಲ್ವರು ನೀರು ಪಾಲು

Update: 2019-03-24 18:24 IST

ಚಿಕ್ಕಮಗಳೂರು, ಮಾ.24: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ರವಿವಾರ ಜಿಲ್ಲೆಯ ಶೃಂಗೇರಿ ಪಟ್ಟಣ ಸಮೀಪದ ವಿದ್ಯಾರಣ್ಯಪುರ ಬಡಾವಣೆ ಬಳಿ ವರದಿಯಾಗಿದೆ.

ನೀರಿನಲ್ಲಿ ಮುಳುಗಿ ಮೃತಪಟ್ಟವರನ್ನು ಶೃಂಗೇರಿ ವಿದ್ಯಾರಣ್ಯಪುರ ಬಡಾವಣೆಯ ಮೆಕಾನಿಕ್ ರಾಮಚಂದ್ರ( ರಾಮಣ್ಣ) ಹಾಗೂ ಇವರ ಸಂಬಂಧಿಗಳಾದ ಕೊಪ್ಪ ತಾಲೂಕು ವ್ಯಾಪ್ತಿಯ ಹುರುಳಿಹಕ್ಲು ಗ್ರಾಮದ ರತ್ನಾಕರ್, ನಾಗೇಂದ್ರ, ಪ್ರದೀಪ್ ಎಂದು ತಿಳಿದು ಬಂದಿದೆ. 

ಈ ನಾಲ್ವರು ಒಂದೇ ಕುಟುಂಬದ ಸದಸ್ಯರಾಗಿದ್ದು, ರವಿವಾರ ಹುರುಳಿ ಹಕ್ಲು ಗ್ರಾಮದ ರತ್ನಾಕರ್, ಪ್ರದೀಪ್, ನಾಗೇಂದ್ರ ಎಂಬವರು ಶೃಂಗೇರಿಯ ವಿದ್ಯಾರಣ್ಯಪುರದಲ್ಲಿರುವ ಸಂಬಂಧಿ ರಾಮಚಂದ್ರ ಎಂಬವರ ಮನೆಗೆ ಆಗಮಿಸಿದ್ದರು. ಮಧ್ಯಾಹ್ನದ ವೇಳೆಗೆ ಈ ನಾಲ್ವರು ಮನೆ ಸಮೀಪದ ತುಂಗಾನದಿಯಲ್ಲಿ ಈಜಲು ತೆರಳಿದ್ದರು. ನಾಲ್ವರು ನೀರಿನಲ್ಲಿದ್ದ ವೇಳೆ ಪ್ರದೀಪ್ ಎಂಬಾತ ನದಿಯ ಸುಳಿಗೆ ಸಿಲುಕಿಕೊಂಡಿದ್ದರೆನ್ನಲಾಗಿದ್ದು, ಪ್ರದೀಪ್‍ನನ್ನು ರಕ್ಷಿಸಲು ಉಳಿದ ಮೂವರು ಮುಂದಾದಾಗ ನಾಲ್ವರೂ ಸುಳಿಗೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. 

ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಶೃಂಗೇರಿ ಪಟ್ಟಣದ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ನುರಿತ ಈಜುಗಾರರೊಂದಿಗೆ ನದಿಯಲ್ಲಿ ನಾಲ್ವರಿಗಾಗಿ ಹುಡುಕಾಡಿದ್ದಾರೆ. ಈ ವೇಳೆ  ರತ್ನಾಕರ್ ಎಂಬವರ ಮೊದಲು ಪತ್ತೆಯಾಗಿದ್ದು, ಮತ್ತೆ ಮೂವರ ಶವಗಳು ಸಂಜೆ ವೇಳೆಗೆ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News