×
Ad

ಸೋಮವಾರದಿಂದ ದ್ವಿತೀಯ ಪಿಯು ಮೌಲ್ಯಮಾಪನ

Update: 2019-03-24 19:40 IST

ಬೆಂಗಳೂರು, ಮಾ.24: ದ್ವಿತೀಯ ಪಿಯು ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಎಲ್ಲ ಶಿಕ್ಷಕರು ಆಗಮಿಸಲಿದ್ದು, ಈ ಸಂಬಂಧ ಯಾವುದೆ ಗೊಂದಲವಿಲ್ಲವೆಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಕೋಶಾಧ್ಯಕ್ಷ ಜಯಣ್ಣ ಸ್ಪಷ್ಟಪಡಿಸಿದ್ದಾರೆ. 

ಶನಿವಾರ ಆರಂಭವಾಗಿದ್ದ ಮೌಲ್ಯಮಾಪನದ ಡಿಕೋಡಿಂಗ್ ಕಾರ್ಯಕ್ಕೆ ಹಲವು ಉಪನ್ಯಾಸಕರು ಗೈರು ಹಾಜರಾಗಿದ್ದರು. ಆದರೆ, ಅವರಿಗೆ ಬಿಡಬ್ಲುಎಸ್ಸೆಬಿ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಉಸ್ತುವಾರಿಯಾಗಿ ನೇಮಿಸಲಾಗಿತ್ತು. ಹೀಗಾಗಿ ಅವರು ಡಿಕೋಡಿಂಗ್ ಕಾರ್ಯಕ್ಕೆ ಗೈರು ಹಾಜರಾಗಿದ್ದು ಬಿಟ್ಟರೆ, ಬೇರೆ ಯಾವ ಉದ್ದೇಶವು ಇಲ್ಲವೆಂದು ತಿಳಿಸಿದರು.

ಕಟ್ಟುನಿಟ್ಟಿನ ಸೂಚನೆ: ಈ ಬಾರಿಯ ಮೌಲ್ಯ ಮಾಪನ ಕಾರ್ಯಕ್ಕೆ 18,005 ಸಹಾಯಕ ಮೌಲ್ಯಮಾಪಕರು ಮತ್ತು 3,114 ಉಪಮುಖ್ಯ ಮೌಲ್ಯಮಾಪಕರುಗಳಿಗೆ ಇಲಾಖೆ ಆದೇಶ ಕಳುಹಿಸಿದೆ. ಎಲ್ಲ ಪ್ರಾಂಶುಪಾಲರಿಗೆ ಆನ್‌ಲೈನ್ ಮೂಲಕ ಸಹಾಯಕ ಮೌಲ್ಯಮಾಪಕರು ಹಾಗೂ ಉಪ ಮುಖ್ಯ ಮೌಲ್ಯಮಾಪಕರು ನೇಮಕಾತಿ ಪಟ್ಟಿಯನ್ನು ಆನ್‌ಲೈನ್ ಪೋರ್ಟರ್‌ನಲ್ಲಿ ಕಳುಹಿಸಿತ್ತು. ಯಾವುದೇ ಮೌಲ್ಯಮಾಪಕರು ಕರ್ತವ್ಯಕ್ಕೆ ಹಾಜರಾಗದೇ ಉಳಿಯುವ ಸಂದರ್ಭದಲ್ಲಿ ಪ್ರಾಂಶುಪಾಲರನ್ನು ಹೊಣೆಗಾರರನ್ನಾಗಿಸಲಾಗುವುದು. ಮೌಲ್ಯಮಾಪನ ಕಾರ್ಯವು ಒಂದು ಸೂಕ್ಷ್ಮ ಹಾಗೂ ಜವಾಬ್ದಾರಿಯಾಗಿದ್ದು, ಈ ಕಾರ್ಯವನ್ನು ಅತ್ಯಂತ ಶ್ರದ್ಧೆ ಹಾಗೂ ಜಾಗರೂಕತೆಯಿಂದ ನಡೆಸಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಜಾಫರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News