ಬಂಡಾಯದ ಬೇಗುದಿ ಮಧ್ಯೆ ನಾಳೆ ನಾಮಪತ್ರ ಸಲ್ಲಿಕೆ ಭರಾಟೆ
ಬೆಂಗಳೂರು, ಮಾ. 24: ತೀವ್ರ ಪೈಪೋಟಿ ಸೃಷ್ಟಿಸಿರುವ ಲೋಕಸಭೆ ಚುನಾವಣಾ ಅಖಾಡ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳಿಗೆ ಬಂಡಾಯದ ಬಿಸಿಯೂ ಬಲವಾಗಿ ತಟ್ಟಿದೆ. ಈ ಮಧ್ಯೆ ಎ.18ಕ್ಕೆ ನಡೆಯಲಿರುವ ಲೋಕಸಮರಕ್ಕೆ ನಾಮಪತ್ರ ಸಲ್ಲಿಸಲು ಮಾ.26 ಕೊನೆಯ ದಿನವಾಗಿದ್ದು, ಕಾಂಗ್ರೆಸ್-ಜೆಡಿಎಸ್(ಮೈತ್ರಿ) ಹಾಗೂ ಬಿಜೆಪಿ ಘಟಾನುಘಟಿ ಅಭ್ಯರ್ಥಿಗಳು ನಾಳೆಯೇ ನಾಮಪತ್ರ ಸಲ್ಲಿಸಲಿದ್ದಾರೆ.
ರಾಜ್ಯದ ಜನರ ಗಮನ ಸೆಳೆದಿರುವ ಮಂಡ್ಯ ಕ್ಷೇತ್ರದಿಂದ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್, ತುಮಕೂರು ಕ್ಷೇತ್ರದಿಂದ ಮಾಜಿ ಪ್ರಧಾನಿ ದೇವೇಗೌಡ, ಮೈತ್ರಿ ಅಭ್ಯರ್ಥಿ ವಿರುದ್ಧವೇ ಬಂಡಾಯದ ಬಾವುಟ ಹಾರಿಸಿರುವ ಹಾಲಿ ಸಂಸದ ಮುದ್ದಹನುಮೇಗೌಡ, ಬೆಂ.ಕೇಂದ್ರ ಕ್ಷೇತ್ರದಿಂದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸೇರಿದಂತೆ ಬಹುತೇಕ ಅಭ್ಯರ್ಥಿಗಳು ನಾಳೆ(ಮಾ.25) ಉಮೇದುವಾರಿಕೆ ಸಲ್ಲಿಸಲಿದ್ದಾರೆ.
ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಎ.18ರಂದು ಮತದಾನ ನಡೆಯಲಿದ್ದು, ಈಗಾಗಲೇ ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ವಿಚಾರ ಮೂರು ಪಕ್ಷಗಳ ಮುಖಂಡರಿಗೆ ತೀವ್ರ ತಲೆನೋವು ತಂದಿದೆ. ಇದರ ಜೊತೆಗೆ ಬಂಡಾಯದ ಬೇಗುದಿಯೂ ತೀವ್ರವಾಗಿದ್ದು, ನಾಳೆಯೊಳಗೆ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸುವ ಸವಾಲು ಎದುರಾಗಿದೆ.
ಬಿಸಿಲಿನ ಬೇಗೆ ದಿನೇ ದಿನೇ ಏರುತ್ತಿರುವಂತೆ ನಾಳೆಯಿಂದಲೇ ಲೋಕಸಭೆ ಚುನಾವಣಾ ಅಖಾಡದ ಕಾವೂ ಹೆಚ್ಚಾಗಲಿದೆ. ತೀವ್ರ ಕುತೂಹಲ ಕೆರಳಿಸಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಸೇರಿದಂತೆ ಕೆಲವು ಕ್ಷೇತ್ರಗಳಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಇನ್ನೂ ಆಖೈರುಗೊಳಿಸಿಲ್ಲ.
28 ಕ್ಷೇತ್ರಗಳ ಪೈಕಿ 23 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅದೇ ರೀತಿ ಕಾಂಗ್ರೆಸ್ ತನ್ನ ಪಾಲಿನ 20 ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಿಗೆ ನಿನ್ನೆ ರಾತ್ರಿ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಇಂದು ಬೆಂ.ದಕ್ಷಿಣ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಿದೆ. ಧಾರವಾಡ ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿಯ ಹೆಸರು ಪ್ರಕಟಿಸಿಲ್ಲ. ಜೆಡಿಎಸ್ ಮಂಡ್ಯ, ಹಾಸನ, ಶಿವಮೊಗ್ಗ ಹಾಗೂ ತುಮಕೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ತನ್ನ ಪಾಲಿನ ಇನ್ನೂ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹುಡುಕಾಟದಲ್ಲಿದೆ.
ಈಗಾಗಲೇ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ, ಬೆಂ.ಕೇಂದ್ರದಿಂದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್, ಪಕ್ಷೇತರ ಅಭ್ಯರ್ಥಿ ನಟ ಪ್ರಕಾಶ್ ರೈ, ತುಮಕೂರು ಕ್ಷೇತ್ರದಿಂದ ಜಿ.ಎಸ್.ಬಸವರಾಜ್, ಹಾಸನದಿಂದ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ, ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಎ.ಮಂಜು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಮಾ.26ರ ಮಂಗಳವಾರ ಕೊನೆ ದಿನ. ಹೀಗಾಗಿ ಅಂದು ನಾಮಪತ್ರ ಸಲ್ಲಿಸಲು ಬಹುತೇಕ ಅಭ್ಯರ್ಥಿಗಳು ಬಯಸುವುದಿಲ್ಲ. ಈ ಹಿನ್ನೆಲೆಯಲ್ಲಿ ಈಗಾಗಲೇ ರಾಜಕೀಯ ಪಕ್ಷಗಳಿಂದ ಅಭ್ಯರ್ಥಿಗಳು ಬಿಫಾರಂ ಪಡೆದಿದ್ದು, ನಾಳೆಯೇ ನಾಮಪತ್ರ ಸಲ್ಲಿಸಲಿದ್ದಾರೆ.
19 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ:
ಚಿಕ್ಕೋಡಿ-ಪ್ರಕಾಶ್ ಹುಕ್ಕೇರಿ
ಬೆಳಗಾವಿ-ವಿರುಪಾಕ್ಷಿ ಎಸ್.ಸಾಧುನವರ್
ಬಾಗಲಕೋಟೆ-ವೀಣಾ ಕಾಶಪ್ಪನವರ್
ಕಲಬುರಗಿ(ಎಸ್ಸಿ)-ಮಲ್ಲಿಕಾರ್ಜುನ ಖರ್ಗೆ
ರಾಯಚೂರು(ಎಸ್ಟಿ)-ಬಿ.ವಿ.ನಾಯಕ್
ಬೀದರ್-ಈಶ್ವರ್ ಬಿ.ಖಂಡ್ರೆ
ಕೊಪ್ಪಳ-ರಾಜಶೇಖರ್ ಹಿಟ್ನಾಳ್
ಬಳ್ಳಾರಿ(ಎಸ್ಟಿ)-ವಿ.ಎಸ್.ಉಗ್ರಪ್ಪ
ಹಾವೇರಿ-ಡಿ.ಆರ್.ಪಾಟೀಲ್
ದಾವಣಗೆರೆ-ಶಾಮನೂರು ಶಿವಶಂಕರಪ್ಪ
ದಕ್ಷಿಣ ಕನ್ನಡ-ಮಿಥುನ್ ರೈ
ಚಿತ್ರದುರ್ಗ (ಎಸ್ಸಿ)-ಬಿ.ಎನ್.ಚಂದ್ರಪ್ಪ
ಮೈಸೂರು-ಕೊಡಗು-ಸಿ.ಎಚ್.ವಿಜಯಶಂಕರ್
ಚಾಮರಾಜನಗರ-ಆರ್.ದ್ರುವನಾರಾಯಣ
ಬೆಂಗಳೂರು ಗ್ರಾಮಾಂತರ-ಡಿ.ಕೆ.ಸುರೇಶ್
ಬೆಂಗಳೂರು ಕೇಂದ್ರ-ರಿಝ್ವಾನ್ ಅರ್ಶದ್
ಬೆಂಗಳೂರು ದಕ್ಷಿಣ-ಬಿ.ಕೆ ಹರಿಪ್ರಸಾದ್
ಚಿಕ್ಕಬಳ್ಳಾಪುರ-ಡಾ.ಎಂ.ವೀರಪ್ಪಮೊಯ್ಲಿ
ಕೋಲಾರ(ಎಸ್ಸಿ)-ಕೆ.ಎಚ್.ಮುನಿಯಪ್ಪ