ಮಗನನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ತಾಯಿ
Update: 2019-03-24 20:14 IST
ಬೆಂಗಳೂರು, ಮಾ.24: ಕೌಟುಂಬಿಕ ಕಲಹದ ಹಿನ್ನೆಲೆ 3 ವರ್ಷದ ಮಗನನ್ನು ಕೊಲೆಗೈದಿರುವ ತಾಯಿ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಇಲ್ಲಿನ ಚಂದ್ರಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಲ್ಯಾಣ ನಗರದ 4ನೇ ಟಿ ಮುಖ್ಯರಸ್ತೆಯ ಪ್ರತಿಮಾ(28) ಎಂಬಾಕೆ, ತನ್ನ ಮಗ ಸಾತ್ವಿಕ್‌ನನ್ನು ಶನಿವಾರ ರಾತ್ರಿ ಕೊಲೆ ಮಾಡಿ, ಬಳಿಕ ತಾನೂ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಅಬಕಾರಿ ಇಲಾಖೆ ಆಯುಕ್ತರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದ ಕಾರವಾರ ಮೂಲದ ಸಂತೋಷ ಶೆಟ್ಟಿ ಅನ್ನು ನಾಲ್ಕು ವರ್ಷದ ಹಿಂದೆ ಯಲ್ಲಾಪುರ ಮೂಲದ ಪ್ರತಿಮಾ ಅವರು ವಿವಾಹವಾಗಿ, ಕಲ್ಯಾಣ ನಗರದಲ್ಲಿ ವಾಸವಾಗಿದ್ದರು. ಆದರೆ, ಶನಿವಾರ ಪ್ರತಿಮಾ ಆತ್ಮಹತ್ಯೆ ಮಾಡಿಕೊಂಡಿದ್ದು, ಕಾರಣ ತಿಳಿದುಬಂದಿಲ್ಲ.
ಮೃತ ದೇಹದ ಬಳಿ, ಪತ್ರವೊಂದು ಸಿಕ್ಕಿದೆ ಎನ್ನಲಾಗಿದ್ದು, ಈ ಸಂಬಂಧ ಚಂದ್ರಲೇಔಟ್ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.