ತುಮಕೂರಿನಲ್ಲಿ ದೇವೇಗೌಡ ಸ್ಪರ್ಧೆ: ಡಿಸಿಎಂ ಪರಮೇಶ್ವರ್ ಗೆ ಕಾಂಗ್ರೆಸ್ ಮುಖಂಡರ ತರಾಟೆ

Update: 2019-03-24 16:30 GMT

ತುಮಕೂರು,ಮಾ,24: ತುಮಕೂರು ಲೋಕಸಭಾ ಕ್ಷೇತ್ರವನ್ನು ಹಾಲಿ ಸಂಸದರಿದ್ದಾಗಲೂ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಡಿಸಿಎಂ ಪರಮೇಶ್ವರ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

ನಗರ ಖಾಸಗಿ ಹೋಟೆಲ್‍ನಲ್ಲಿ ಕರೆದಿದ್ದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಡಿಸಿಎಂ ಪರಮೇಶ್ವರ್, ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನಾಮಪತ್ರ ಸಲ್ಲಿಸುತ್ತಿರುವ ಬಗ್ಗೆ ಚರ್ಚಿಸುತ್ತಿದ್ದಾಗ ಕಾಂಗ್ರೆಸ್ ಮುಖಂಡ ರಾಯಸಂದ್ರ ರವಿ ಹಾಗೂ ಬೆಂಬಲಿಗರು ಡಿಸಿಎಂ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಸಭೆಯಿಂದ ಹೊರನಡೆದರು.

'ಮೈತ್ರಿ ಧರ್ಮದ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಳುಗಿಸಲಾಗುತ್ತಿದೆ. ಜೆಡಿಎಸ್‍ಗೆ ಜಿಲ್ಲೆಯಲ್ಲಿ ಯಾರೂ ಮತ ಹಾಕುವುದಿಲ್ಲ, ಬಿಜೆಪಿಯನ್ನು ಸೋಲಿಸಲು ಎಸ್.ಪಿ.ಮುದ್ದಹನುಮೇಗೌಡ ಸಮರ್ಥ ವ್ಯಕ್ತಿಯಾಗಿದ್ದರೂ, ಮೈತ್ರಿ ಧರ್ಮದ ಹೆಸರಿನಲ್ಲಿ ಅವರಿಗೆ ಮೋಸ ಮಾಡಲಾಗಿದ್ದು, ಸೋಮವಾರ ಬಂಡಾಯ ಅಭ್ಯರ್ಥಿಯಾಗಿ ಎಸ್.ಪಿ.ಮುದ್ದಹನುಮಮೇಗೌಡ ನಾಮಪತ್ರ ಸಲ್ಲಿಸಲಿದ್ದು, ಗೆಲುವು ಸಾಧಿಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಯಸಂದ್ರ ರವಿ ತಿಳಿಸಿದರು.

'ತುಮಕೂರು ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯನ್ನು ಹಾಕುವ ಬದಲಿಗೆ ಎರಡು ಪಕ್ಷಗಳು ಸ್ಪರ್ಧಿಸಿದರೂ ಮುದ್ದಹನುಮೇಗೌಡ ಗೆಲುವು ಸಾಧಿಸುತ್ತಾರೆ. ಆದರೆ ಮೈತ್ರಿ ಹೆಸರಿನಲ್ಲಿ ಒಬ್ಬ ಸಮರ್ಥ ನಾಯಕನನ್ನು ಬಲಿಕೊಡುವುದಕ್ಕೆ ಬಿಡುವುದಿಲ್ಲ' ಎಂದು ಏರುಧ್ವನಿಯಲ್ಲಿ ಡಾ.ಜಿ.ಪರಮೇಶ್ವರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಡಾ.ಜಿ.ಪರಮೇಶ್ವರ್ ಮಾತನಾಡಿ, ಕ್ಷೇತ್ರದಿಂದ ಮಾಜಿ ಪ್ರಧಾನಿ ದೇವೇಗೌಡ ಸ್ಪರ್ಧಿಸದಿದ್ದರೆ, ಕ್ಷೇತ್ರವನ್ನು ಬಿಟ್ಟುಕೊಡುವಂತೆ ಕೇಳಬಹುದಿತ್ತು. ಆದರೆ ದೇವೇಗೌಡರೇ ಸ್ಪರ್ಧಿಸಲು ಮುಂದಾಗಿರುವುದರಿಂದ ಪಕ್ಷದ ವರಿಷ್ಠರು ಜಿಲ್ಲಾ ಕಾಂಗ್ರೆಸ್‍ಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಿದ್ದು, ಎಲ್ಲರೂ ಒಟ್ಟಾಗಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ ಎಂದರು.

ಸಂಸದ ಮುದ್ದಹನುಮೇಗೌಡ ಅವರು ಬಂಡಾಯ ಸ್ಪರ್ಧೆ ಮಾಡುವುದನ್ನು ಬಿಟ್ಟು ಮೈತ್ರಿ ಅಭ್ಯರ್ಥಿ ಗೆಲುವಿಗೆ ಸಹಕಾರ ನೀಡಬೇಕಿದೆ. ಪಕ್ಷ ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತ ಸ್ಥಾನ ನೀಡಲಿದೆ ಎಂದು ಭರವಸೆ ನೀಡಿದ ಅವರು, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡರೆ ಪಕ್ಷದಿಂದ ಉಚ್ಛಾಟಿಸುವ ಎಚ್ಚರಿಕೆಯನ್ನು ನೀಡಿದರು.

ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ಕೊರಟಗೆರೆ, ಮಧುಗಿರಿ, ಚಿನಾಹಳ್ಳಿ, ತಿಪಟೂರು ತಾಲೂಕುಗಳ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿದರು. ಹಾಲಿ ಸಂಸದ ಮುದ್ದಹನುಮೇಗೌಡ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಸಭೆ ಗೈರಾಗಿದ್ದು, ಸಭೆಯಲ್ಲಿ ಕೊರಟಗೆರೆ ಕ್ಷೇತ್ರದ ಕಾರ್ಯಕರ್ತರು ಭಾಗವಹಿಸಿದ್ದರು ಎನ್ನಲಾಗಿದೆ.

ಸಭೆಯಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಸಂತೋಷ್ ಜಯಚಂದ್ರ, ಶಫೀ ಅಹ್ಮದ್, ಕೆ.ಷಡಕ್ಷರಿ, ರಫೀಕ್ ಅಹ್ಮದ್, ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಪ್ರೊ,ರಾಧಾಕೃಷ್ಣ, ಜಿ,ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣಮೂರ್ತಿ ಸೇರಿದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಾಲಿಕೆ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

"ಟಿಕೆಟ್ ತಪ್ಪಿಸಿದ್ದು ನಾನಲ್ಲ"
ಹಾಲಿ ಸಂಸದ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ತಪ್ಪಿಸಿದ್ದು ನಾನಲ್ಲ, ಮೈತ್ರಿಯಂತೆ ಟಿಕೆಟ್ ಹಂಚಿಕೆಯಾದ ನಂತರ ಹೆಚ್‍ಡಿಡಿ ಭೇಟಿ ಮಾಡಿ, ತುಮಕೂರಿನಿಂದ ನೀವು ಸ್ಪರ್ಧಿಸದೇ ಇದ್ದಲ್ಲಿ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಒತ್ತಾಯ ಮಾಡಿದ್ದೆ, ಹೆಚ್‍ಡಿಡಿ ಈಗ ತುಮಕೂರಿನಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಕಾರ್ಯಕರ್ತರು, ಮುಖಂಡರು ಒಂದಾಗಿ ಅವರನ್ನು ಗೆಲ್ಲಿಸಬೇಕಿದೆ. ಹಾಲಿ ಸಂಸದರು ಬಂಡಾಯ ಸ್ಪರ್ಧೆ ಮಾಡುವುದಾಗಿ ಹೇಳಿದ್ದು, ಅವರಿಗೆ ಸಾಕಷ್ಟು ಕಾಲಾವಕಾಶವಿದ್ದು, ತಮ್ಮ ನಿರ್ಣಯವನ್ನು ಮರುಪರಿಶೀಲನೆ ಮಾಡಲಿದ್ದಾರೆ ಎಂದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News