×
Ad

ಮೈಸೂರು: ಕಾಂಗ್ರೆಸ್ ಮುಖಂಡರ ಜೊತೆ ಗೌಪ್ಯ ಸಭೆ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ

Update: 2019-03-24 23:06 IST

ಮೈಸೂರು,ಮಾ.24: ಮೈಸೂರು-ಕೊಡಗು ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ಗೌಪ್ಯ ಸಭೆ ನಡೆಸಿದ್ದಾರೆ.

ಬೆಂಗಳೂರಿನಿಂದ ಮೈಸೂರಿಗೆ ರವಿವಾರ ಆಗಮಿಸಿದ ಸಿದ್ದರಾಮಯ್ಯ ನೇರವಾಗಿ ಖಾಸಗಿ ಹೋಟೆಲ್‍ಗೆ ತೆರಳಿ ಕಾಂಗ್ರೆಸ್ ಮುಖಂಡರಾದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಗೆಲುವಿಗೆ ರಣತಂತ್ರ ರೂಪಿಸುತ್ತಿರುವ ಸಿದ್ದರಾಮಯ್ಯ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ತನ್ವೀರ್ ಸೇಠ್, ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಜೊತೆ ಚರ್ಚೆ ನಡೆಸಿದ್ದಾರೆ.

ಮೈಸೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇರುವುದರಿಂದ ನಮ್ಮ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಅವರ ಗೆಲುವಿಗೆ ಯಾವ ಮಾನದಂಡ ಅನುಸರಿಸಬೇಕು, ಮತ್ತು ಜೆಡಿಎಸ್ ಮುಖಂಡರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಚರ್ಚೆಯಾಗಿದೆ ಎನ್ನಲಾಗಿದೆ.

ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಅವರಿಗೆ ಸಿದ್ದರಾಮಯ್ಯ ಬಿ-ಫಾರಂ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಮಾ.25 ರಂದು ಸಿ.ಎಚ್.ವಿಜಯಶಂಕರ್ ನಾಮಪತ್ರ ಸಲ್ಲಿಸಲಿದ್ದಾರೆ. ಕಾಂಗ್ರೆಸ್-ಜೆಡಿಎಸ್ ನಡುವೆ ಒಪ್ಪಂದ ಇದ್ದರೂ ಜೆಡಿಎಸ್ ನಾಯಕರು ನಾಮಪತ್ರ ಸಲ್ಲಿಸುವ ವೇಳೆ ಆಗಮಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News