ಯಾರ ಪರವೂ ಚುನಾವಣಾ ಪ್ರಚಾರ ಮಾಡುವುದಿಲ್ಲ: ನಟ ಶಿವರಾಜ್ ಕುಮಾರ್ ಸ್ಪಷ್ಟನೆ

Update: 2019-03-24 17:45 GMT

ಮೈಸೂರು,ಮಾ.24: ಲೋಕಸಭಾ ಚುನಾಣೆಯಲ್ಲಿ ನಾನು ಯಾರ ಪರವೂ ಚುನಾವಣಾ ಪ್ರಚಾರ ಮಾಡುವುದಿಲ್ಲ ಎಂದು ನಟ ಶಿವರಾಜ್ ಕುಮಾರ್ ಸ್ಪಷ್ಟಪಡಿಸಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ರವಿವಾರ ಕವಚ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾರ ಪರವೂ ಚುನಾವಣಾ ಪ್ರಚಾರ ಕೈಗೊಳ್ಳುವುದಿಲ್ಲ. ನನಗೆ ರಾಜಕಾರಣ ತುಂಬಾ ದೂರ, ನನ್ನ ಪತ್ನಿ ಶಿವಮೊಗ್ಗದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರಿಂದಷ್ಟೇ ನಾನು ಅವಳ ಪರ ಮತಯಾಚಿಸಿದೆ. ಆದರೆ ನಾನು ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಬರುವುದಿಲ್ಲ ಎಂದು ಹೇಳಿದರು.

ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಸುಮಲತಾ ನಿಮ್ಮನ್ನು ಆಹ್ವಾನಿಸಿದರೆ ನೀವು ಹೋಗುವಿರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಅವರು ಕರೆದರೂ ಹೋಗುವುದಿಲ್ಲ ಕರೆಯದೇ ಇದ್ದರೂ ಹೋಗುವುದಿಲ್ಲ. ಅವರಿಗೆ ರಾಜಕೀಯ ಏನು ಎಂದು ಗೊತ್ತು. ನನಗೆ ರಾಜಕಾರಣದ ಅಡಿಪಾಯ ಏನೆಂದು ಗೊತ್ತಿಲ್ಲ. ಹಾಗಾಗಿ ನಾನು ಎಲ್ಲೂ ಹೋಗುವುದಿಲ್ಲ ಎಂದು ಹೇಳಿದರು.

ಮಂಡ್ಯದಲ್ಲಿ ನಿಂತಿರುವವರೆಲ್ಲಾ ಒಳ್ಳೆಯವರೇ. ಅಲ್ಲಿ ಯಾರನ್ನು ಗೆಲ್ಲಿಸಬೇಕು ಎಂದು ಜನ ತೀರ್ಮಾನ ಮಾಡುತ್ತಾರೆ. ಯಾರು ಬಂದು ಪ್ರಚಾರ ಮಾಡಿದರೂ ಅಷ್ಟೆ, ಮಾಡದಿದ್ದರೂ ಅಷ್ಟೇ. ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ತಮ್ಮ ಕಷ್ಟವನ್ನು ತಾವೇ ಎದುರಿಸಬೇಕು: ನಟಿ ವಿಜಯಲಕ್ಷ್ಮಿ ನನಗೆ ಶಿವರಾಜ್ ಕುಮಾರ್ ಆಗಲಿ ರಾಘವೇಂದ್ರ ರಾಜ್‍ಕುಮಾರ್ ಆಗಲಿ ಸ್ವಲ್ಪವೂ ಸಹಾಯ ಮಾಡಲಿಲ್ಲ ಎಂದು ಆರೋಪಿಸಿದ್ದಾರಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಹಾಯ ಮಾಡಲು ಅವರೊಬ್ಬರೇ ಇಲ್ಲ, ಸಾಕಷ್ಟು ಜನ ಸಹಾಯ ಕೇಳುತ್ತಾರೆ. ನಾವು ಬಲಗೈಯಲ್ಲಿ ಮಾಡುವ ಸಹಾಯ ಎಡಗೈಗೆ ಗೊತ್ತಾಗಬಾರದು ಎನ್ನುವವರು ನಾವು. ನಾವು ಏನು ಮಾಡಿದ್ದೇವೆ ಎಂಬುದು ನಮಗೆ ಗೊತ್ತು ಎಂದರು.

ನಮಗೆ ಕಷ್ಟ ಎಂದು ನಾವು ಇನ್ನೊಬ್ಬರ ಬಗ್ಗೆ ಮಾತನಾಡಬಾರದು. ನಮ್ಮ ಕಷ್ಟವನ್ನು ನಾವೇ ಎದುರಿಸಿ ಹೊರಬರಬೇಕು. ಇವತ್ತು ಸಾಕಷ್ಟು ಮಹಿಳೆಯರು ಗಾರ್ಮೆಂಟ್ಸ್ ಗಳಿಗೆ ಹೋಗಿ ತಮ್ಮ ಕುಟುಂಬದ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಅವರನ್ನು ನೋಡಿದರೆ ನನಗೆ ಖುಷಿಯಾಗುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News