ಅತೃಪ್ತ ಕಾಂಗ್ರೆಸ್ಸಿಗರಿಂದ ಸುಮಲತಾ ಪರ ಹೋರಾಟ ?

Update: 2019-03-24 18:08 GMT

ಮಂಡ್ಯ, ಮಾ.24: ಕಾಂಗ್ರೆಸ್ ಮಾಜಿ ಸಚಿವ ಚಲುವರಾಯಸ್ವಾಮಿ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಪಿ.ಎಂ.ನರೇಂದ್ರಸ್ವಾಮಿ ಸೇರಿದಂತೆ ಕೆಲ ಅತೃಪ್ತ ನಾಯಕರ ದಂಡು ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಾರಂಭದಿಂದಲೂ ತೆರೆಮರೆ ಕಸರತ್ತು ನಡೆಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಎರಡು ದಿನಗಳ ಹಿಂದೆ ಸಿಎಂ ಕುಮಾರಸ್ವಾಮಿ ಪುತ್ರನ ಗೆಲುವಿಗಾಗಿ ಸ್ವಾಭಿಮಾನ ಬಿಟ್ಟು, ಯಾರ ಬಳಿಯೂ ಭಿಕ್ಷೆ ಬೇಡುವುದಿಲ್ಲ ಎಂಬ ಹೇಳಿಕೆ ಬಳಿಕ ಕೆರಳಿರುವ ಅತೃಪ್ತ ಕಾಂಗ್ರೆಸ್ಸಿಗರು, ಮೈತ್ರಿ ಧರ್ಮ ಬದಿಗಿಟ್ಟು, ಸುಮಲತಾ ಪರ ಹೋರಾಟಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. 

ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಸುಮಲತಾ ಪರ ಚುನಾವಣೆಯಲ್ಲಿ ಕೆಲಸ ಮಾಡುವಂತೆ ಮಂಡ್ಯ ನಗರಸಭೆ ಮಾಜಿ ಸದಸ್ಯ ಎಂ.ಎಸ್.ಶಿವಪ್ರಕಾಶಬಾಬು ಅವರಲ್ಲಿ ದೂರವಾಣಿ ಮೂಲಕ ಚರ್ಚಿಸಿದ್ದಾರೆ ಎನ್ನಲಾದ ಕರೆ ವೈರಲ್ ಆಗಿದ್ದು, ಮೈತ್ರಿ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

'ಎಲ್ಲರೂ ದಯವಿಟ್ಟು ಸುಮಲತಾ ಪರ ಕೆಲಸ ಮಾಡಿ, ಮಂಡ್ಯದ ಮರ್ಯಾದೆ ಉಳಿಸಿ, ಸ್ವಾಭಿಮಾನ ಕಾಪಾಡಲು ಎಲ್ಲರೂ ಕೆಲಸ ಮಾಡಬೇಕು. ನನ್ನನ್ನು ನಂಬು, ಏನೇ ಇದ್ದರೂ ನನ್ನ ಬಳಿ ಬಾ. ಯಾವ ಬೇಳೆ ಕಾಳು ಕುಮಾರಣ್ಣನೂ ಬರೋಲ್ಲ. ನಾನು ಸತ್ತರೆ ನೀನು ಬರಬೇಕು, ನೀ ಸತ್ತರೆ ನಾನು ಬರಬೇಕು. ನಾನು ಬೇಕಂದ್ರೆ ನೀನು ಸುಮಲತಾ ಪರ ಕೆಲಸ ಮಾಡು ಎಂದು ಚಲುವರಾಯಸ್ವಾಮಿ ಸಂಭಾಷಣೆಯಲ್ಲಿ ಮನವಿ ಮಾಡಿದ್ದಾರೆ ಎನ್ನಲಾದ ವಾಯ್ಸ್ ವೈರಲ್ ಆಗಿದೆ.

ಇದಕ್ಕೆ, ನಾನು ಬೆಂಗಳೂರಿನಲ್ಲಿ ಈಗಾಗಲೇ ಕುಮಾರಣ್ಣ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರಿಕೊಂಡಿದ್ದೇನೆ. ನಾಳೆ ನಮ್ಮ ಮನೆಗೆ ಕುಮಾರಣ್ಣ ಬರುತ್ತಿದ್ದಾರೆ. ಏನು ಮಾಡೋದು? ನಮಗೆ ಮಂಡ್ಯದಲ್ಲಿ ಲೀಡರ್ ಇಲ್ಲ. ಯಾರನ್ನು ನಂಬಿಕೊಂಡು ಬರಲಿ? ನಾನು ಜೆಡಿಎಸ್ ಪರ ಕೆಲಸ ಮಾಡುತ್ತೇನೆ ಎಂದು ಶಿವಪ್ರಕಾಶ್ ಬಾಬು ಪ್ರತಿಕ್ರಿಯಿಸಿದಾಗ, ಆಯ್ತು ಹೋಗಪ್ಪ ಎಂದು ಹೇಳಿ ಚಲುವರಾಯಸ್ವಾಮಿ ಸಂಭಾಷಣೆ ಕಡಿತಗೊಳಿಸುತ್ತಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News